ಕೆಜಿಎಫ್ :ಲಾಕ್‍ಡೌನ್ ಅನುಷ್ಠಾನವು ಪರಿಣಾಮಕಾರಿಯಾಗಿರುವ ಬಗ್ಗೆ ಪರಾಮರ್ಶೆಯನ್ನು ನಡೆಸಲು, ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ದ್ರೋಣ್ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ಮಾಡಿರುವುದಾಗಿ ಜಿಲ್ಲಾ ರಕ್ಷಣಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ತಿಳಿಸಿದರು.

ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಮೇ. 3ರ ತನಕ ರಾಷ್ಟ್ರದಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕೆಜಿಎಫ್ ಪೊಲೀಸ್ ಜಿಲ್ಲೆಯ ಬಂಗಾರಪೇಟೆ ಮತ್ತು ಕೆಜಿಎಫ್ ತಾಲ್ಲೂಕುಗಳಲ್ಲಿ ಲಾಕ್‍ಡೌನ್ ಯಶಸ್ವಿಯಾಗಿರುವುದನ್ನು ಪರಾಮರ್ಶಿಸಲು ದ್ರೋಣ್ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆಯನ್ನು ಮಾಡಿರುವುದಾಗಿ ವಿವರಿಸಿದರು.
ಜನಸಾಮಾನ್ಯರು ಅನಾವಶ್ಯಕವಾಗಿ ಓಡಾಡುವುದನ್ನು ಹಾಗೂ ವಾಹನಗಳವರು ವಿನಾಕಾರಣ ಗಾಡಿಗಳಲ್ಲಿ ತಿರುಗಾಡುವುದನ್ನು ತಡೆಯುವ ಉದ್ದೇಶದಿಂದ, ಲಾಕ್‍ಡೌನ್ ನಿಷೇದಾಜ್ಞೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ದ್ರೊಣ್ ಕ್ಯಾಮೆರಾ ಕಣ್ಗಾವಲು 24 ಗಂಟೆಗಳ ಕಾಲ ಕೆಜಿಎಫ್ ಮತ್ತು ಬಂಗಾರಪೇಟೆ ತಾಲ್ಲೂಕುಗಳಲ್ಲಿ ವ್ಯವಸ್ಥೆ ಮಾಡಿ, ಪರಾಮರ್ಶಿಸುತ್ತಿರುವುದಾಗಿ ಜಿಲ್ಲಾ ರಕ್ಷಣಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ವಿವರಿಸಿದರು.
ದ್ರೋಣ್ ಕ್ಯಾಮೆರಾ ಉಸ್ತುವಾರಿಯನ್ನು ಡಿವೈಎಸ್ಪಿ ಬಿ.ಕೆ.ಉಮೇಶ್, ಡಿಸಿಐಬಿ ಇನ್ಸ್‍ಪೆಕ್ಟರ್ ಜಿ.ಪಿ. ರಾಜು, ನಿಸ್ತಂತು ಪಿಎಸ್‍ಐ ನಾಗಪ್ಪ ಖಾನಾಪುರ ಅವರುಗಳು ನೋಡಿಕೊಳ್ಳುತ್ತಿದ್ದು, ಕೆಜಿಎಫ್ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ಮೂಲಕ ವೀಕ್ಷಿಸಲಾಗುತ್ತಿದೆಯೆಂದರು. ಸಾರ್ವಜನಿಕರು ಮನೆಗಳಲ್ಲಿದ್ದು, ಸುರಕ್ಷಿತರಾಗಿರುವಂತೆ ತಪ್ಪಿದ್ದಲ್ಲಿ ಲಾಕ್‍ಡೌನ್ ನಿಷೇದಾಜ್ಞೆಯನ್ನು ಉಲ್ಲಂಘಿಸುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಎಸ್‍ಪಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ತಿಳಿಸಿದರು.
