ಕುಪ್ಪೆಪದವು:ಪ್ರಮುಖ ಇಲಾಖೆ ಗಳ ಅಧಿಕಾರಿಗಳು ಗೈರು ಹಾಜಾರಾದ ಕಾರಣ ಗುರುವಾರ ನಡೆಯಬೇಕಾಗಿದ್ದ ಕುಪ್ಪೆಪದವು ಪಂಚಾಯತ್ ನ ಕೆಡಿಪಿ ಸಭೆಯಲ್ಲಿ ,ಅಧಿಕಾರಿಗಳ ಗೈರು ಹಾಜರಿಯ ಬಗ್ಗೆ ನಿರ್ಣಯ ಕೈಗೊಂಡು ಸಭೆಯನ್ನು ಮುಂದೂಡ ಲಾಯಿತು ,ಪಂಚಾಯತ್ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(20 ಅಂಶ ಕಾರ್ಯಕ್ರಮವು ಸೇರಿದಂತೆ)ಪ್ರಗತಿ ಪರಿಶೀಲನೆ ಸಭೆಯನ್ನು ಬೆಳಿಗ್ಗೆ 11 ಗಂಟೆಗೆ ನಡೆಸಲು ನಿರ್ಧರಿಸಲಾಗಿತ್ತು ,ಅರಣ್ಯ ಇಲಾಖೆ ,ಕಲ್ಲಾಡಿ ಪ್ರೌಢಶಾಲೆ ,ಕುಪ್ಪೆಪದವು ಅರಮನೆ ಪ್ರೌಢಶಾಲೆ ,ಪ್ರಾಥಮಿಕ ಶಾಲೆ ಗಳ ಮುಖ್ಯಸ್ಥರು,ಮತ್ತು ಒಂದೆರಡು ಅಂಗನವಾಡಿ ಕಾರ್ಯಕರ್ತೆಯರನ್ನು ಹೊರತು ಪಡಿಸಿ ಉಳಿದಂತೆ ಯಾವುದೇ ಪ್ರಮುಖ ಇಲಾಖೆಗಳ ಅಧಿಕಾರಿಗಳು ಹಾಜರಾಗದಿದ್ದ ಕಾರಣ,ಸಭೆಯನ್ನು ಮುಂದೂಡಲಾಗಿದೆ ಎಂದು ನಿರ್ಣಯ ದಾಖಲಿಸಿ ಸಭೆಯನ್ನು ಮುಂದೂಡಲಾಯಿತು

.ಸದಸ್ಯರಿಂದ ಸಭೆ ಬಹಿಸ್ಕಾರ: ಪಂಚಾಯತ್ ವ್ಯಾಪ್ತಿಯ ಮಾಂಗ್ಲಿಚಾರು ಎಂಬಲ್ಲಿ ಮೋರಿ ನಿರ್ಮಾಣ ಕಾಮಗಾರಿ ನಡೆಸಿದ್ದಾರೆ ಗುತ್ತಿಗೆದಾರರಿಗೆ ಕಾಮಗಾರಿಯ ಚೆಕ್ ಅನ್ನು ನೀಡದೆ ಇರುವುದನ್ನು ಪ್ರತಿಭಟಿಸಿ ಪಂಚಾಯತ್ ಸದಸ್ಯರು ಕೆಡಿಪಿ ಸಭೆಯನ್ನು ಬಹಿಷ್ಕರಿಸಿದ್ದರು ,ಮಾಂಗ್ಲಿಚಾರು ಎಂಬಲ್ಲಿ ಮೋರಿ ನಿರ್ಮಿಸಿ ಮೂರು ವರ್ಷವಾದರೂ ಗುತ್ತಿಗೆದಾರ ಮಹೇಂದ್ರ ಎಂಬವರಿಗೆ ಕಾಮಗಾರಿಯ ಮೊತ್ತವನ್ನು ಪಾವತಿಸಿರಲಿಲ್ಲ ,ಈ ಬಗ್ಗೆ ಕಳೆದ ಸಾಮಾನ್ಯ ಸಭೆಯಲ್ಲಿ ಕೆಡಿಪಿ ಸಭೆಗೂ ಮುನ್ನ ಗುತ್ತಿಗೆದಾರರಿಗೆ ಚೆಕ್ ಪಾವತಿಸಬೇಕೆಂದು ನಿರ್ಣಯಿಸಲಾಗಿದ್ದರೂ ,ಇದುವರೆಗೂ ಚೆಕ್ ವಿತರಿಸದೆ ಇರುವುದರಿಂದ ಕೆಡಿಪಿ ಸಭೆಯನ್ನು ಬಹಿಷ್ಕರಿಸುವುದಾಗಿ ಪಂಚಾಯತ್ ಸದಸ್ಯರು ಪಟ್ಟು ಹಿಡಿದರು .ಆದರೆ ಪ್ರಮುಖ ಅಧಿಕಾರಿಗಳು ಕೂಡಾ ಹಾಜರಾಗದೆ ಇದ್ದುದರಿಂದ ಸಭೆಯನ್ನೇ ಮುಂದೂಡಲಾಯಿತು.
ಚೆಕ್ ನೀಡದೆ ಇರುವ ಬಗ್ಗೆ ಪ್ರತಿಕ್ರಿಯಿಸಿದ ಪಂ.ಅಭಿವೃದ್ಧಿ ಅಧಿಕಾರಿ ಸವಿತಾ ಮಂದೋ ಲಿಕರ್ ಅವರು ಕಾಮಗಾರಿ ನಡೆಸಲಾದ ಜಾಗದ ಬಗ್ಗೆ ಸ್ಥಳೀಯರೋರ್ವರು ಆಕ್ಷೇಪ ಎತ್ತಿದ್ದು ,ಜಾಗದ ಸರ್ವೇ ನಡೆಸುವಂತೆ ಸರ್ವೇ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಸರ್ವೇ ನಡೆಸಿಲ್ಲ ,ಸರ್ವೇ ನಡೆದು ಮೋರಿ ಅಳವಡಿಸಿದ ಜಾಗ ಸರಕಾರಕ್ಕೆ ಸೇರಿದ್ದೆಂದು ವರದಿ ದೊರೆಯದೆ ಚೆಕ್ ನೀಡಲು ಸಾಧ್ಯವಾಗಿಲ್ಲ ಎಂದರು .