ಗುರುಪುರ : ಇತ್ತೀಚೆಗೆ ನಿವೃತ್ತಿ ಹೊಂದಿದ ಗುರುಪುರ ಪೇಟೆ ಅಂಗನವಾಡಿ ಕೇಂದ್ರದ ಅಂಗನವಾಡಿ ಸಹಾಯಕಿ ಲಲಿತಾರಿಗೆ ಶನಿವಾರ(ಫೆ. 8) ಕೇಂದ್ರದಲ್ಲಿ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಯಿತು.ಗಂಜಿಮಠ ವಲಯ ಅಂಗನವಾಡಿ ಮೇಲ್ವಿಚಾರಕಿ ಉಷಾ ಡಿ ಮಾತನಾಡಿ, ಗುರುಪುರ ಮಾಣೈಬೆಟ್ಟು ಕೇಂದ್ರದಲ್ಲಿ 14 ವರ್ಷ ಸೇವೆ ಸಲ್ಲಿಸಿರುವ ಲಲಿತಾರು ನಂತರ 13 ವರ್ಷ ಗುರುಪುರ ಪೇಟೆ ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.
ಪುಟಾಣಿಗಳಿಗೆ ತಾಯಿಯ ಮಮತೆ ತೋರಿಸುತ್ತಿದ್ದರು. ಯಾವುದೇ ಲೋಪದೋಷಗಳಾಗದಂತೆ ಸುದೀರ್ಘ ವರ್ಷ ಕಾರ್ಯ ನಿರ್ವಹಿಸಿದ್ದಾರೆ ಎಂದು ಅಭಿಮಾನ ವ್ಯಕ್ತಪಡಿಸಿದರು.ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ರಾಜೇಶ್ ಸುವರ್ಣ, ಸೇಸಮ್ಮ ಹಾಗೂ ಬಿಜೆಪಿ ಸ್ಥಳೀಯ ನಾಯಕಿ ನಳಿನಾಕ್ಷಿ ಶೆಟ್ಟಿ, ದೀಪಕ್ ಬಂಗೇರ, ಲಕ್ಷ್ಮಣ್ ಗುರುಪುರ, ಜಲಜಾ ಗುರುಪುರ, ಸುಜಾತಾ, ಭಾರತಿ ಮತ್ತಿತರರು ಉಪಸ್ಥಿತರಿದ್ದರು.ಲಲಿತಾರ ಬಗ್ಗೆ ಜಲಜಾ ಹಾಗೂ ಕೇಂದ್ರದ ಪುಟಾಣಿಗಳು ಹಾಡಿ ಕೊಂಡಾಡಿದರೆ, ರಾಜೇಶ್ ಸುವರ್ಣ, ಪಾರ್ವತಿ ಮತ್ತು ಸ್ಮಿತಾ ಎಸ್ ಕಾಮತ್ ಗುಣಗಾನ ಮಾಡಿದರು. ಸನ್ಮಾನಕ್ಕುತ್ತರವಾಗಿ ಮಾತನಾಡಿದ ಲಲಿತಾ ಭಾವೋದ್ವೇಗಕ್ಕೊಳಗಾಗಿ ಮಾತು ಮುಗಿಸಿದರು. ಅಂಗನವಾಡಿ ಸಹಾಯಕಿ ಮಲ್ಲಿಕಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


