ಮಂಗಳೂರು:ದೆಪ್ಪುಣಿಗುತ್ತು ದಿ.ಸದಾಶಿವ ಶೆಟ್ಟರ ಹಾಗೂ ಮೇಗಿನ ಮನೆ ದಿ.ಜಯರಾಮ ನಾಯ್ಕರ ಸೇವಾರ್ಥವಾಗಿ ನಡೆಯುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ ಸೇವೆಯ ವಜ್ರಮಹೋತ್ಸವ ಸಮಾರಂಭ ಫೆ. ೮ರಂದು ನಗರದ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.ವಜ್ರಮಹೋತ್ಸವದ ಹಿನ್ನೆಲೆಯಲ್ಲಿ ವಿಶೇಷ ಸಭಾ ಕಾರ್ಯಕ್ರಮ, ಗೌರವಾರ್ಪಣೆ, ಪ್ರಶಸ್ತಿ ಪ್ರಧಾನ, ಯಕ್ಷಗಾನ ತಾಳಮದ್ದಳೆ, ಯಕ್ಷಗಾನ ಸೇವಾಭಿನಂದನೆ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮ ನಡೆಯಲಿದೆ ಎಂದು ರಾಮಣ್ಣ ಶೆಟ್ಟಿ ಮುಗಿಪು ಹಾಗೂ ಸುಮಾವಾಣಿ ಜೆ, ನಾಯ್ಕ್ ಜಂಟಿಯಾಗಿ ತಿಳಿಸಿದ್ದಾರೆ.
ಬೆಳಗ್ಗೆ ೯.೩೦ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಕುಡುಪು ಕ್ಷೇತ್ರದ ಬ್ರಹ್ಮಶ್ರೀ ವೇದಮೂರ್ತಿ ಕೆ. ನರಸಿಂಹ ತಂತ್ರಿ, ಕಟೀಲು ಕ್ಷೇತ್ರದ ಮೊಕ್ತೇಸರರಾದ ವೇದಮೂರ್ತಿ ಕೆ. ವಾಸುದೇವ ಆಸ್ರಣ್ಣ, ಶ್ರೀ ಕ್ಷೇತ್ರದ ಅರ್ಚಕರಾದ ವೇದಮೂರ್ತಿ ಲಕ್ಷ್ಮೀ ನಾರಾಯಣ ಆಸ್ರಣ್ಣ, ವೇದಮೂರ್ತಿ ಕೆ. ವೆಂಕಟರಮಣ ಆಸ್ರಣ್ಣ, ವೇದಮೂರ್ತಿ ಕೆ. ಅನಂತಪದ್ಮನಾಭ ಆಸ್ರಣ್ಣ, ವೇದಮೂರ್ತಿ ಕೆ. ಕಮಲಾದೇವಿಪ್ರಸಾದ ಆಸ್ರಣ್ಣ, ವೇದಮೂರ್ತಿ ಕೆ. ಹರಿನಾರಾಯಣದಾಸ ಆಸ್ರಣ್ಣ ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಕಾವೂರು ಕ್ಷೇತ್ರದ ಅರ್ಚಕ ಕೆ. ಶ್ರೀನಿವಾಸ ಭಟ್ ಚಾಲನೆ ನೀಡಲಿದ್ದಾರೆ.
ಶ್ರೀ ಕ್ಷೇತ್ರಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಕ್ಷೇತ್ರ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಸಭಾಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಕಟೀಲಿನ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ವಹಿಸಲಿದ್ದಾರೆ. ಕೂಳೂರು ಬೀಡಿನ ವಜ್ರಕುಮಾರ್ ಕರ್ಣಂತಾಯ ಬಲ್ಲಾಳ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕಟೀಲು ಮೇಳದ ಸಂಚಾಲಕರಾದ ದೇವಿಪ್ರಸಾದ್ ಶೆಟ್ಟಿ ಕಲ್ಲಾಡಿ ಭಾಗವಹಿಸಲಿದ್ದಾರೆ. ಯಕ್ಷಾವ್ಯಯನಿಧಿ ಸುಣ್ಣಂಬಳ ವಿಶ್ವೇಶ್ವರ ಭಟ್ ಇಡೀ ಕಾರ್ಯಕ್ರಮದ ಕುರಿತು ಸಮಗ್ರ ಪ್ರಸ್ತಾವಿಕ ನುಡಿಗಳನ್ನು ಹೇಳಿದ್ದಾರೆ.
ಕಟೀಲು ಮೇಳವನ್ನು ಸಮರ್ಥವಾಗಿ ನಿಭಾಯಿಸಿ, ಸರ್ವರಿಂದಲೂ ಪ್ರೀತಿ, ಗೌರವದಿಂದ ಯಜಮಾನರೆಂದು ಕರೆಸಿಕೊಂಡು ಬಂದ ಕಲ್ಲಾಡಿ ದಿ. ಕೊರಗ ಶೆಟ್ಟಿ ಹಾಗೂ ಕಲ್ಲಾಡಿ ವಿಠಲ ಶೆಟ್ಟಿ ಗೌರವಾರ್ಥ ಕಟೀಲು ಮೇಳದ ಸಂಚಾಲಕರಾದ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ಅವರಿಗೆ ಗೌರವಾರ್ಪಣೆ ನಡೆಸಲಾಗುವುದು.
ಕೊಡೆತ್ತೂರುಗುತ್ತು ದಿ. ರಾಮಣ್ಣ ಶೆಟ್ಟಿ ಪ್ರಶಸ್ತಿಯನ್ನು ಶ್ರೀ ಕುಮಾರ್ ಪಡ್ರೆ, ದೆಪ್ಪುಣಿಗುತ್ತು ದಿ. ದೇಕಿ ಶೆಡ್ತಿ ಪ್ರಶಸ್ತಿಯನ್ನು ಕೃಷ್ಣಮೂಲ್ಯ ಕೈರಂಗಳ, ದೆಪ್ಪುಣಿಗುತ್ತು ದಿ. ಸದಾಶಿವ ಶೆಟ್ಟಿ ಪ್ರಶಸ್ತಿಯನ್ನು ಶ್ರೀಧರ ಪಂಜಾಜೆ, ಶೆಡ್ಡೆ ಮೇಗಿನ ಮನೆ ದಿ. ಗುಲಾಬಿ ಶೆಡ್ತಿ ಪ್ರಶಸ್ತಿಯನ್ನು ಲಕ್ಷ್ಮಣ ಕೋಟ್ಯಾನ್, ಸಂಗೀತ ವಿದ್ವಾನ್ ಬೆಳಿಂಜೆ ದಿ. ಮೈಂದಪ್ಪ ರೈ ಪ್ರಶಸ್ತಿಯನ್ನು ಬಲಿಪ ಪ್ರಸಾದ ಭಾಗವತ, ತಲಪಾಡಿ ದೊಡ್ಡಮನೆ ದಿ. ಸುಶೀಲ ರೈ ಪ್ರಶಸ್ತಿಯನ್ನು ವಿಠಲ ಶೆಟ್ಟಿ ಗುರುವಾಯಿನಕೆರೆ, ಶೆಡ್ಡೆ ಮೇಗಿನಮನೆ ದಿ. ಜಯರಾಮ ನಾಯ್ಕ್ ಪ್ರಶಸ್ತಿಯನ್ನು ಮೋನಪ್ಪ ಗೌಡ ಮಡಂತ್ಯಾರು ಅವರಿಗೆ ನೀಡಲಾಗುವುದು.
ಇದೇ ವೇಳೆ ಕಾವೂರು ಮಾಗಣೆ ಹಾಗೂ ಮೂಡುಶೆಡ್ಡೆ ಗ್ರಾಮದಲ್ಲಿ ಶ್ರೀ ಕಟೀಲು ಮೇಳಗಳ ಯಕ್ಷಗಾನ ಬಯಲಾಟ ಸೇವೆಯ ಸುವರ್ಣ ಮಹೋತ್ಸವ ಆಚರಿಸಿ ಸುದೀರ್ಘ ಕಾಲ ಶ್ರೀ ಕಟೀಲು ಅಮ್ಮನವರ ಸೇವೆಯನ್ನು ಮಾಡಿದ ಸೇವಾಕರ್ತರಿಗೆ ಯಕ್ಷಗಾನ ಸೇವಾಭಿನಂದನೆ ನೀಡಲಾಗುವುದು.
ಬೈಲುಮೂಡುಕರೆ ದಿ. ತ್ಯಾಂಪಣ್ಣ ನಾಯ್ಕ್ ಗೌರವಾರ್ಥ ಬೈಲುಮೂಡುಕರೆ ದಿ. ಚಂದ್ರಶೇಖರ ಶೆಟ್ಟಿ, ಶೆಡ್ಡೆ ಹೊಸಮನೆ ಮನೆಯವರಿಗೆ, ಶೆಡ್ಡೆ ಮೇಗಿನಮನೆ ದಿ. ಜಾನಕಿ ನಾಯ್ಕ್ ಗೌರವಾರ್ಥ ಶ್ರೀ ದೇವಿ ಭಜನಾ ಮಂದಿರ ಮೂಡುಶೆಡ್ಡೆ ಅವರಿಗೆ, ದೆಪ್ಪುಣಿಗುತ್ತು ದಿ. ಚಂದ್ರಹಾಸ ಶೆಟ್ಟಿ ಗೌರವಾರ್ಥ ಹತ್ತು ಸಮಸ್ತರು ಅತ್ರಬೈಲು ಕುಂಜತ್ತಬೈಲು ಅವರಿಗೆ, ಕೊಡಿಯಾಲ್ಗುತ್ತು ದಿ.ವೇದಾವತಿ ಶೆಡ್ತಿ ಗೌರವಾರ್ಥ ದಿ. ಬಿ.ಕೆ. ವಿಶ್ವನಾಥ್ ಕೂಳೂರು ಮನೆಯವರಿಗೆ, ದೆಪ್ಪುಣಿಗುತ್ತು ದಿ. ಪದ್ಮನಾಭ ಶೆಟ್ಟಿ ಗೌರವಾರ್ಥ ಹತ್ತು ಸಮಸ್ತರು ಮಂಜಲಕಟ್ಟೆ ಕಾವೂರು ಅವರಿಗೆ, ಐಕಳಬಾವಾ ದಿ.ಶೀಲಾವತಿ ಶೆಡ್ತಿ ಗೌರವಾರ್ಥ ದಿ. ಲೋಲಮ್ಮ ಪಚ್ಚನಾಡಿ ಮನೆಯವರಿಗೆ, ಅರ್ಥಧಾರಿ, ಸ್ವಾತಂತ್ರ್ಯ ಹೋರಾಟಗಾರ ದಿ. ನಾರಾಯಣ ಕಿಲ್ಲೆ ಗೌರವಾರ್ಥ ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ ಮುಗುರುಕೋಡಿ ಅವರಿಗೆ ಯಕ್ಷಗಾನ ಸೇವಾಭಿನಂದನೆ ನೀಡಲಾಗುವುದು.
ಶೆಡ್ಡೆ ಮೇಗಿನಮನೆ ದಿ. ಗುಲಾಬಿ ಶೆಡ್ತಿ ಮುಗಿಪು ಬೋಂದೆಲ್ ಸ್ಮರಣಾರ್ಥ ಯಕ್ಷಗಾನ ತಾಳಮದ್ದಳೆ ‘ಪಾರ್ಥ ಸಾರಥ್ಯ’ವು ಮಧ್ಯಾಹ್ನ ೧.೩೦ಕ್ಕೆ ನಡೆಯಲಿದೆ. ಹಿಮ್ಮೇಳದಲ್ಲಿ ದಿನೇಶ್ ಅಮ್ಮಣ್ಣಾಯ, ಅಂಡಾಲ ದೇವಿಪ್ರಸಾದ ಶೆಟ್ಟಿ, ಸುಬ್ರಹ್ಮಣ್ಯ ಶಾಸ್ತ್ರಿ ಮಣಿಮುಂಡ, ಮುರಾರಿ ಕಡಂಬಳಿತ್ತಾಯ ಹಾಗು ಭರತೇಶ ಕಾಟಿಪಳ್ಳ ಮುಮ್ಮೇಳದಲ್ಲಿ ಶಂಭು ಶರ್ಮ ವಿಟ್ಲ, ಅಶೋಕ್ ಭಟ್ ಉಜಿರೆ, ಸುಣ್ಣಂಬಳ ವಿಶ್ವೇಶ್ವರ ಭಟ್ ಹಾಗು ರವಿರಾಜ ಪನೆಯಾಲ ಭಾಗವಹಿಸಲಿದ್ದಾರೆ. ರಾತ್ರಿ ೮.೩೦ಕ್ಕೆ ಚೌಕಿ ಪೂಜೆ ನಡೆಯಲಿದ್ದು, ಬಳಿಕ ಆಹೋರಾತ್ರಿ ಕಟೀಲು ಶ್ರೀ ಮೇಳದಿಂದ ‘ಶ್ರೀ ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ತಿಳಿಸಿದ್ದಾರೆ.

