ಮೂಡುಬಿದಿರೆ:ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಶ್ರಿತ ಶ್ರೀ ಕಾಳಿಕಾಂಬಾ ಸೇವಾ ಸಮಿತಿ ಮತ್ತು ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿಯವರು ಅರಮನೆ ಬಾಗಿಲು -ಕೊಂಡೆಬೀದಿಯ ಬಳಿ ಇರುವ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ 55 ಮಕ್ಕಳೊಂದಿಗೆ ಮನರಂಜನೆ, ಸ್ಪರ್ಧೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಆಯೋಜಜಿಸಲಾಯಿತು.
ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಮೂರನೇ ಮೊಕ್ತೇಸರ ಶಿವರಾಮ ಆಚಾರ್ಯ ಉಳಿಯ, ಮಹಿಳಾ ಸಮಿತಿಯ ಅಧ್ಯಕ್ಷೆ ಸಂಧ್ಯಾ ಜಯಕರ ಆಚಾರ್ಯ, ಸೇವಾ ಸಮಿತಿ ಅಧ್ಯಕ್ಷ ಎನ್. ಶಿವಪ್ರಸಾದ್ ಆಚಾರ್ಯ ಇವರು ವಿಶೇಷ ಮಕ್ಕಳ ಜತೆಗೂಡಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿಗಾರ್ ಅವರನ್ನು ದೇವಳ ಹಾಗೂ ಉಭಯ ಸಮಿತಿಗಳ ವತಿಯಿಂದ ರೂ. 10,000 ನಗದು ಸಹಿತ ಸಾಂಪ್ರದಾಯಿಕವಾಗಿ ಸನ್ಮಾನಿಸಲಾಯಿತು. ದೇವಳದ ಆಡಳಿತ ಸಮಿತಿ ಸದಸ್ಯರಾದ ಬೆಳುವಾಯಿ ಭಾಸ್ಕರ ಆಚಾರ್ಯ, ಗೀತಾ ಯೋಗೀಶ ಆಚಾರ್ಯ ಉಪಸ್ಥಿತರಿದ್ದರು.
ಮಹಿಳಾ ಸಮಿತಿ ಕಾರ್ಯದರ್ಶಿ ನವೀನಾ ಬಾಲಚಂದ್ರ ಆಚಾರ್ಯ, ಸೇವಾ ಸಮಿತಿ ಕಾರ್ಯದರ್ಶಿ ಶ್ರೀನಾಥ್ ಆಚಾರ್ಯ ಸಹಿತ ಪದಾಧಿಕಾರಿಗಳು, ಸದಸ್ಯರ ಸಹಿತ 50ಕ್ಕೂ ಅಧಿಕ ಮಂದಿಯ ಜತೆಗೆ ಪೆÇೀಷಕರೂ ಪಾಲ್ಗೊಂಡಿದ್ದರು.
ನಿತ್ಯ 55 ಮಕ್ಕಳಿಗೆ ಊಟ ತಯಾರಿಸುವ ಪ್ರಕಾಶ್ ಅವರ ಪತ್ನಿ ಉಷಾ ಹಾಗೂ ಶಾಲೆಯ 10 ಮಂದಿ ಶಿಕ್ಷಕಿಯರನ್ನು ಗೌರಿವಿಸಲಾಯಿತು. ಕಾರ್ಯಕ್ರಮದಿಂದ ಪ್ರೇರಿತರಾಗಿ, ಸೇವಾ ಸಮಿತಿಯ ಅಲಂಗಾರ್ನ ಶಶೀಂದ್ರ ಆಚಾರ್ಯ ಅವರು ರೂ. 10,000 ನೀಡಿ, ಇನ್ನು ಮುಂದೆ ಪ್ರತಿವರ್ಷವೂ ಇಷ್ಟೇ ಮೊತ್ತ ನೀಡುವುದಾಗಿ ಘೋಷಿಸಿದರು. ಸಭಾಭವನ ಸಮಿತಿಯ ಅರವಿಂದ ವೈ. ಆಚಾರ್ಯ ಅವರು ಮಾಸಿಕ ರೂ. 500 ನೀಡುವುದಾಗಿ ಭರವಸೆ ನೀಡಿದರು.
ಮಹಿಳಾ ಸಮಿತಿಯ ದೀಪಾ, ಜಯಂತಿ,ಜಯಶ್ರೀ, ರಶ್ಮಿತಾ, ಮಲ್ಲೇಶ್, ಪೂರ್ಣಶ್ರೀ ವೈಯಕ್ತಿಕ ಹಾಗೂ ಸಮೂಹ ಗಾಯನದ ಮೂಲಕ ಮಕ್ಕಳನ್ನು ರಂಜಿಸಿದರು. ರಶ್ಮಿತಾ, ಸುಶ್ಮಿತಾ, ದೀಪಾ ಮೊದಲಾದವರು ನರ್ತಿಸಿದರು. ವಿಶೇಷ ಮಕ್ಕಳು ರಾಜ್ಯಮಟ್ಟದಲ್ಲಿ ಬಹುಮಾನ ಗೆದ್ದ `ಪರಿಸರ ಕಾಳಜಿ’ಯ ಕುರಿತಾದ ಪ್ರಹಸನ ವೀಕ್ಷಕರಲ್ಲಿ ಹೊಸ ಸ್ಪೂರ್ತಿಯನ್ನು ಮೂಡಿಸಿತು.
ಮಕ್ಕಳಿಗಾಗಿ ಮನೋರಂಜನ ಆಟಗಳನ್ನು ಆಡಿಸಲಾಯಿತು.
