ಕೋಲಾರ : ಚೇತರಿಕೆ ಅಸಾಧ್ಯವೆಂಬಷ್ಟರ ಮಟ್ಟಿಗೆ ನಷ್ಟದಲ್ಲಿದ್ದ ಕೋಲಾರ ಡಿಸಿಸಿ ಬ್ಯಾಂಕ್ ಇದೀಗ ಎಲ್ಲಾ ರೀತಿಯಲ್ಲೂ ಸದೃಢವಾಗಿರುವ ಹಿನ್ನಲೆಯಲ್ಲಿ ಸಾಕ್ಷ್ಯಚಿತ್ರ ತಯಾರಿಕೆಗೆ ನಬಾರ್ಡ್ ಮುಂದಾಗಿದ್ದು, ಜನವರಿ 2ನೇ ವಾರ ಮುಖ್ಯಮಂತ್ರಿಗಳು ಬಿಡುಗಡೆ ಮಾಡಲಿದ್ದಾರೆ ಎಂದು ನಬಾರ್ಡ್ ಎಜಿಎಂ ನಟರಾಜನ್ ತಿಳಿಸಿದರು.
ಗುರುವಾರ ನಗರದ ಡಿಸಿಸಿ ಬ್ಯಾಂಕ್ ಸಭಾಗಂಣದಲ್ಲಿ ನಡೆದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಇಡೀ ದೇಶದ ಗಮನವೇ ಸೆಳೆದಿದೆ. ಇಂತಹ ಸಂದರ್ಭದಲ್ಲಿ ಇಲ್ಲಿನ ಸಂಪನ್ಮೂಲತೆ ಹೆಚ್ಚಿಸಲು ನಬಾರ್ಡ್ನಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು. ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಎಲ್ಲ ರೀತಿಯಾಗಿ ಸದೃಢಗೊಂಡಿದ್ದು, 2020ರ ಮಾರ್ಚ್ 31ರೊಳಗೆ ನೂತನ ಶಾಖೆ ಆರಂಭಿಸಲು ಕ್ರಮಕೈಗೊಳ್ಳಬೇಕು, ಬ್ಯಾಂಕ್ನ ಈ ಯಶಸ್ಸಿನ ಕುರಿತು ಸಹಕಾರ ಕ್ಷೇತ್ರಕ್ಕೆ ತಿಳಿಸುವ ಅಗತ್ಯ ಇರುವುದರಿಂದ ಬ್ಯಾಂಕ್ ಸಾಧನೆ ಬಗ್ಗೆ ಸಾಕ್ಷ ಚಿತ್ರ ರಚನೆ ಮಾಡಲಾಗುವುದು ತಿಳಿಸಿದರು.
ಡಿಸಿಸಿ ಠೇವಣಿ ಸಂಗ್ರಹಣೆಯಲ್ಲಿ ಕೊಂಚ ಹಿಂದೆ ಇದ್ದರೂ, ಸಾಲ ವಿತರಣೆ, ವಸೂಲಿ, ಷೇರುಗಳ ಸಂಗ್ರಹದಲ್ಲಿ ಮುಂದಿದೆ. ರಾಜ್ಯದಲ್ಲಿನ ಎಲ್ಲ ಡಿಸಿಸಿ ಬ್ಯಾಂಕ್ಗಳ ಪೈಕಿ ಅತಿ ಹೆಚ್ಚು ಮಹಿಳಾ ಸಂಘಗಳಿಗೆ ಸಾಲ ನೀಡಿರುವುದು ಕೋಲಾರ ಜಿಲ್ಲೆಯಲ್ಲಿ ಮಾತ್ರ, ಮಹಿಳೆಯರು ಸಾಲದ ಹಣದಲ್ಲಿ ಸ್ವಾವಲಂಭಿ ಬದುಕಟ್ಟಿಕೊಳ್ಳುವುದರ ಜತೆಗೆ, ಅಷ್ಟೇ ಪ್ರಮಾಣವಾಗಿ ಮರುಪಾವತಿ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು. ನೂತನ ಶಾಖೆ ಆರಂಭಿಸಲು ಎಲ್ಲ ರೀತಿಯ ಅವಕಾಶಗಳಿವೆ, ಎಲ್ಲಿ ನೂತನ ಶಾಖೆ ಆರಂಭಿಸಬೇಕು ಎಂದು ಜಾಗ ಗುರುತಿಸಬೇಕು. ಆರಂಭದಿಂದಲೇ ಆನ್ಲೈನ್ ಪದ್ದತಿ ಅಳವಡಿಸಬೇಕು. ಬ್ಯಾಂಕಿನಿಂದ ಕೇವಲ ಸಾಲ ವಿತರಣೆಗೆ ಸಿಮೀತಗೊಳಿಸಬೇಡಿ, ಇದರ ಜತೆಗೆ ಠೇವಣಿ ಸಂಗ್ರಹಿಸಬೇಕು ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮಾತನಾಡಿ, ಬ್ಯಾಂಕಿನಿಂದ 500 ಕೋಟಿ ಠೇವಣಿ ಸಂಗ್ರಹಿಸಲು ಗುರಿ ಹಾಕಿಕೊಂಡಿದ್ದು, ಈ ಪೈಕಿ ಬ್ಯಾಂಕಿನ ನಿರ್ದೇಶಕರಿಗೆ, ಸೋಸೈಟಿಗಳ ಕಾರ್ಯದರ್ಶಿಗಳಿಗೆ ಹಾಗೂ ಬ್ಯಾಂಕಿನ ಅಧಿಕಾರಿಗಳಿಗೂ ಗುರಿ ನೀಡಲಾಗಿದೆ. ಎಲ್ಲರೂ ಸಕ್ರಿಯಾಗಿ ಕೆಲಸ ಆರಂಭಿಸಿದ್ದಾರೆ ಎಂದು ಹೇಳಿದರು. ನಾನು ಪ್ರತಿ ಹಂತದಲ್ಲೂ ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ, ಇತ್ತೀಚಿಗೆ ಅಪೆಕ್ಸ್ ಮತ್ತು ನಬಾರ್ಡ್ ಬ್ಯಾಂಕ್ ಮಟ್ಟದಲ್ಲಿ ನಡೆದ ಸಭೆಯಲ್ಲಿ ಠೇವಣಿ ಒಂದು ವಿಚಾರ ಬಿಟ್ಟರೆ, ಉಳಿದ ವಿಚಾರಗಳ ಬಗ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಠೇವಣಿ ಹೆಚ್ಚಿಸಬೇಕು ಎಂಬ ಸಂಕಲ್ಪದೊಂದಿಗೆ ಅಧಿಕಾರಿಗಳು, ಆಡಳಿತ ಮಂಡಳಿಯವರು ಕೆಲಸ ಮಾಡುತ್ತಿದ್ದಾರೆ ಎಂದರು.
ನಬಾರ್ಡ್ ಬ್ಯಾಂಕ್ ಎಜಿಎಂ ನಟರಾಜನ್ ಎರಡೂ ಜಿಲ್ಲೆಯ ಸಹಕಾರಿ ಸಂಸ್ಥೆಗಳನ್ನು ಉತ್ತಮ, ಮಧ್ಯಮ ಹಾಗೂ ಸಾಮಾನ್ಯವೆಂದು ವಿಂಗಡಿಸಿ ಸವಕಲಾಗಿರುವ ಸಂಸ್ಥೆಗಳನ್ನು ಆರ್ಥಿಕವಾಗಿ ಸಶಕ್ತಗೊಳಿಸಲು ನೀಲನಕ್ಷೆ ರೂಪಿಸಬೇಕು. ಸಂಸ್ಥೆಗಳ ವಹಿವಾಟು ಹೆಚ್ಚಿಸುವ ಮೂಲಕ ಲಾಭದತ್ತ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು. ಎಲ್ಲಾ ಸಹಕಾರಿ ಸಂಸ್ಥೆಗಳಲ್ಲಿ ಭದ್ರತಾ ಠೇವಣಿ ಇರುವಂತೆ ನೋಡಿಕೊಳ್ಳುವುದರ ಜತೆಗೆ ಹಣ ಕಡ್ಡಾಯವಾಗಿ ಬ್ಯಾಂಕ್ನಲ್ಲೇ ಇರುವಂತೆ ಮೇಲ್ವಿಚಾರಕರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. ಸಹಕಾರಿ ಸಂಘಗಳ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸಲು ನಬಾರ್ಡ್ನಿಂದ 25 ಹಣಕಾಸು ವಹಿವಾಟು ಕಾರ್ಯಾಗಾರ ನಡೆಸಲಾಗುವುದು. ಇದಕ್ಕೆ ನಬಾರ್ಡಿನಿಂದಲೇ ಸಂಪನ್ಮೂಲ ವ್ಯಕ್ತಿಗಳನ್ನು ಕಳುಹಿಸಲಾಗುವುದು ಎಂದು ಹೇಳಿದರು.

ಬ್ಯಾಂಕಿನ ಹಿಂದಿನ ಪರಿಸ್ಥಿತಿ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ. ಅನೇಕ ಸವಾಲುಗಳನ್ನು ಎದುರಿಸಿಕೊಂಡು ಯಶಸ್ಸಿನತ್ತ ಸಾಗಿದೆ. ಸಾಧನೆ ಬಗ್ಗೆ ಸಾಕ್ಷ ಚಿತ್ರ ರಚಿಸಲಾಗುವುದು. ಇದಕ್ಕೆ ಎಲ್ಲ ಫ್ಯಾಕ್ಸ್ಗಳ ಹಾಗೂ ಡಿಸಿಸಿ ಬ್ಯಾಂಕಿನ ಉತ್ತಮ ಚಿತ್ರಗಳನ್ನು ಕಳುಹಿಸಿಕೊಡಬೇಕು, ಚಿತ್ರವನ್ನು 2020ರ ಜನವರಿ 2ನೇ ವಾರ ಮುಖ್ಯಮಂತ್ರಿ ಬಿಡುಗಡೆಗೊಳಿಸುತ್ತಾರೆ ಎಂದು ತಿಳಿಸಿದರು. ಮಾರ್ಚ್ ಅಂತ್ಯದೊಳಗೆ ಎಲ್ಲ ಸಂಘಗಳ ಲೆಕ್ಕ ಪರಿಷ್ಕರಣೆಯಾಗಿರಬೇಕು, ಆಡಳಿತ ಮಂಡಳಿಯ ಅವಧಿ ಮುಗಿರುವ ಸೊಸೈಟಿಗಳ ಚುನಾವಣೆ ನಡೆಸಬೇಕು ಎಂದು ಹೇಳಿದರು. ಸಭೆಯಲ್ಲಿ ಡಿಸಿಸಿ ಬ್ಯಾಂಕಿನ ಎಂಡಿ ರವಿ, ಸಹಾಯಕ ಪ್ರಬಂಧಕರಾದ ಶಿವಕುಮಾರ್, ಖಲ್ಲೀಂವುಲ್ಲಾ, ಸಹಕಾರ ಸಂಘಗಳ ಸಹಾಯಕ ನಿಬಂಧಕ ನೀಲಪ್ಪ ಮತ್ತಿತರರು ಹಾಜರಿದ್ದರು.

