ಶ್ರೀನಿವಾಸಪುರ : ತಾಲ್ಲೂಕು ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಗೌನಿಪಲ್ಲಿ ಮೀಸಲು ಕ್ಷೇತ್ರದ ಆರ್.ಜಿ.ನರಸಿಂಹಯ್ಯ ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸಾಮಾಜಿಕ ನ್ಯಾಯ ಸಮಿತಿ, ಸಾಮಾನ್ಯ ಸ್ಥಾಯಿ ಸಮಿತಿ, ಹಣಕಾಸು ಮತ್ತು ಲೆಕ್ಕ ಪರಿಶೋಧನ ಸಮಿತಿಗಳ ರಚನೆ ಪ್ರಕ್ರಿಯೆ ನಡೆಯಲಾಗಿದ್ದು ತಾಲ್ಲೂಕು ಪಂಚಾಯ್ತಿ ಸಮಿತಿಯಲ್ಲಿ 18 ಮಂದಿ ಸದಸ್ಯರು ಆಯ್ಕೆಯಾಗಿದ್ದು, ಇವರಲ್ಲಿ 16 ಮಂದಿ ಸದಸ್ಯರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಆರ್.ಜಿ.ನರಸಿಂಹಯ್ಯ ರವರನ್ನು ಅವಿರೋಧವಾಗಿ ಆಯ್ಕೆ
ಮಾಡಿರುತ್ತಾರೆ.

ನೂತನವಾಗಿ ಆಯ್ಕೆಯಾದ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಅರ್.ಜಿ.ನರಸಿಂಹಯ್ಯ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ತಳಿಗೆ ಅವರ ತಂಡದವರು ಮಾಲಾರ್ಪಣೆ ಸಲ್ಲಿಸಿ ನಂತರ
ಸುದ್ದಿಗಾರರೊಂದಿಗೆ ಮಾತನಾಡಿ ನಾನು ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದು ನನ್ನ ಆಯ್ಕೆಗೆ ಸಹಕರಿಸಿದ ಮತದಾರ ಬಂದುಗಳಿಗೆ ಮತ್ತು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಲು ಸಹಕರಿಸಿದ ಎಲ್ಲಾ
ಸದಸ್ಯರುಗಳಿಗೆ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಹಿರಿಯ ಮುಖಂಡಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆಂದರು. ಈ ಅಧ್ಯಕ್ಷರ ಸ್ಥಾನದ ಘನತೆ ಗೌರವ ಕಾಪಾಡಿಕೊಂಡು ಎಲ್ಲರ ಸಹಕಾರದಿಂದ ತಾಲ್ಲೂಕಿನ
ಸರ್ವತೋಮುಖ ಅಭಿವೃದ್ದಿಗೆ ಮತ್ತು ಸರ್ಕಾರದಿಂದ ಬರುವ ಯೋಜನೆಗಳನ್ನು ವಿಶೇಷವಾಗಿ ಎಸ್.ಸಿ, ಎಸ್.ಟಿ ಸಮಾಜಗಳ ಮನೆಬಾಗಲಿಗೆ ತಲುಪುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸವನ್ನು ಮಾಡುತ್ತೇನೆ. ಹಾಗೆಯೇ
ತಾಲ್ಲೂಕಿನಲ್ಲಿ ನಿರ್ವಹಣೆಯಾಗುತ್ತಿರುವ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟಲ್ ನಿರ್ವಹಣೆಯ ಸಮಸ್ಯೆಗಳನ್ನು ನಿವಾರಿಸಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸೇರಬೇಕಾದ ಎಲ್ಲಾ
ಸೌಲಭ್ಯಗಳನ್ನು ಒದಗಿಸಲು ಇಲಾಖೆಗಳ ಅಧಿಕಾರಿಗಳೊಂದಿಗೆ ಸಹಕರಿಸಿಕೊಂಡು ಹೆಚ್ಚು ಒತ್ತು ನೀಡುತ್ತೇನೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ನರೇಶ್, ಉಪಾಧ್ಯಕ್ಷ ಮಂಜುಳ, ಸದಸ್ಯರಾದ
ಕೃಷ್ಣಾರೆಡ್ಡಿ, ರಾಜಶೇಖರರೆಡ್ಡಿ, ಮಂಜುನಾಥರೆಡ್ಡಿ, ಶ್ರೀರಾಮಪ್ಪ, ಯರ್ರಪ್ಪರೆಡ್ಡಿ, ಆರ್.ಕೆ.ಮಂಜುನಾಥ್, ರಾಧಮ್ಮ ಇತರೆ ಸದಸ್ಯರು ಇ.ಒ.ಆನಂದ್, ಮತ್ತು ಸಿಬ್ಬಂದಿಯಾದ ಮಂಜುನಾಥ್, ವಿಜಯಮ್ಮ, ಮತ್ತಿತರರು
ಹಾಜರಿದ್ದರು.
