ಪುತ್ತೂರು: ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಆರೆಸ್ಸೆಸ್ ಮುಖಂಡರನ್ನು ಕರೆಸಿ ಬುಧವಾರ ಸಂಜೆ ವೈದ್ಯರ ನೇತೃತ್ವದಲ್ಲಿ ಬಿಜೆಪಿ ಪರವಾಗಿ ಗುಪ್ತ ಸಭೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.ಬಾಗಿಲು ಹಾಕಿದ ಕೋಣೆಯಲ್ಲಿ ವೈದ್ಯರ ಸಭೆ ನಡೆಸುವ ಮೂಲಕ ಚಿಕಿತ್ಸೆಗಾಗಿ ಬಂದಿದ್ದ ಹಲವಾರು ರೋಗಿಗಳನ್ನು ಗಂಟೆಗಟ್ಟಲೆ ಕಾಯುವಂತೆ ಮಾಡಿದ್ದಾರೆ ಎಂದು ದೂರಲಾಗಿದೆ.ಬುಧವಾರ ಸಂಜೆ 5 ಗಂಟೆಯಿಂದ ಸುಮಾರು 2 ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಆರೆಸ್ಸೆಸ್ ಮುಖಂಡರಿಬ್ಬರು ಆಸ್ಪತ್ರೆಯ ವೈದ್ಯರು, ಸಂಪೂರ್ಣ ಸಿಬ್ಬಂದಿಗೆ ಚುನಾವಣೆಯಲ್ಲಿ ಪಕ್ಷವೊಂದನ್ನು ಬೆಂಬಲಿಸುವ ಬಗ್ಗೆ ತಿಳಿಸುತ್ತಿದ್ದರು ಎನ್ನಲಾಗಿದೆ. ಆಸ್ಪತ್ರೆಯ ಈ ನಡೆಯ ಬಗ್ಗೆ ಚಿಕಿತ್ಸೆಗಾಗಿ ಬಂದಿದ್ದ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಚುನಾವಣಾ ಪ್ರಚಾರಾರ್ಥ ಆಸ್ಪತ್ರೆಯಲ್ಲಿ ನಡೆದ ಈ ಆರೆಸ್ಸೆಸ್ ಗುಪ್ತ ಸಭೆಯ ಬಗ್ಗೆ ಮಾಹಿತಿ ನೀಡಿರುವ ಹೆಸರು ಬಹಿರಂಗಪಡಿಸಲು ಇಚ್ಛಿಸದ ರೋಗಿಯೊಬ್ಬರು, ‘‘ನಾನು ಇಲ್ಲಿನ ವೈದ್ಯರನ್ನು ಹಲವು ವರ್ಷಗಳಿಂದ ಔಷಧಿಗಾಗಿ ಸಂದರ್ಶಿಸುತ್ತಿದ್ದೇನೆ. ಬುಧವಾರ ಸಂಜೆ ನಾನು ವೈದ್ಯರ ಬಳಿ ಪರೀಕ್ಷೆಗಾಗಿ ಆಗಮಿಸಿದ್ದೆ. ಆದರೆ, ಈ ಸಂದರ್ಭ ವೈದ್ಯರು ಇನ್ನೊಂದು ಕೊಠಡಿಯಲ್ಲಿ ಸಭೆಯನ್ನು ನಡೆಸುತ್ತಿದ್ದರು. ಆರೆಸ್ಸೆಸ್‌ ನ ಪ್ರಚಾರಕರಿಬ್ಬರು ಮಾತನಾಡುತ್ತಿದ್ದರು. ಅವರ ಮಾತು ಕೇಳಲೆತ್ನಿಸಿದ ನನ್ನನ್ನು ಆಸ್ಪತ್ರೆಯ ಕಾವಲುಗಾರ ತಡೆದರು. ಅಲ್ಲದೆ, ಅಲ್ಲಿಂದ ದೂರ ಹೋಗುವಂತೆ ಸೂಚಿಸಿದರು’’ ಎಂದು ತಿಳಿಸಿದ್ದಾರೆ.

‘‘ಸಭೆಯಲ್ಲಿ ಬಿಜೆಪಿಯನ್ನು, ಮೋದಿಯನ್ನು ಬೆಂಬಲಿಸುವಂತೆ ತಿಳಿಸುತ್ತಿದ್ದರು. ಈ ಬಗ್ಗೆ ನಾನು ಬಳಿಕ ಆಸ್ಪತ್ರೆಯ ಮಾಲಕರಲ್ಲಿ ಪ್ರಶ್ನಿಸಿದ್ದೇನೆ. ಅಲ್ಲದೆ, ಸಭೆ ನಡೆಯುತ್ತಿರುವ ಬಗ್ಗೆ ಯಾರೋ ಚುನಾವಣಾಧಿಕಾರಿಗಳಿಗೂ ದೂರು ಕೂಡ ನೀಡಿದ್ದರು. ಆದರೆ, ಚುನಾವಣಾಧಿಕಾರಿಗಳು ಬರುವ ಮುನ್ಸೂಚನೆ ಅರಿತ ಅವರು ತುರ್ತಾಗಿ ಸಭೆಯನ್ನು ಮುಗಿಸಿದರು’’ ಎಂದವರು ಮಾಹಿತಿ ನೀಡಿದ್ದಾರೆ.”ಖಾಸಗಿ ಆಸ್ಪತ್ರೆಗಳಲ್ಲಿ ಇಂತಹ ಚುನಾವಣಾ ಪ್ರಚಾರ ನಡೆಸುವುದರಿಂದ ಅಲ್ಲಿಗೆ ಆಗಮಿಸುವ ರೋಗಿಗಳಿಗೆ ಆಗುತ್ತಿರುವ ತೊಂದರೆ, ಸಮಸ್ಯೆಗಳನ್ನು ವೈದ್ಯರು ಪರಿಗಣನೆಗೆ ತೆಗೆದುಕೊಳ್ಳದಿರುವುದು ದುರಂತ’’ ಎಂದವರು ಬೇಸರ ವ್ಯಕ್ತಪಡಿಸಿದ್ದಾರೆ.

WhatsApp Image 2019-04-05 at 9.54.03 AM

ಇತ್ತೀಚೆಗೆ ಪುತ್ತೂರಿನ ಇನ್ನೊಂದು ಖಾಸಗಿ ಆಸ್ಪತ್ರೆಯೊಂದರಲ್ಲೂ ಇಂತಹ ಸಭೆ ನಡೆದಿತ್ತೆನ್ನಲಾಗಿದೆ. ಮತದಾನದ ಜಾಗೃತಿ ಎಂಬ ಹೆಸರಿನಲ್ಲಿ ನಡೆಸಲಾಗುತ್ತಿರುವ ಈ ಸಭೆಯಲ್ಲಿ ಬಿಜೆಪಿಯ ಪರವಾಗಿ ಸಭೆ ನಡೆಸಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಖಂಡನೆ ಆಸ್ಪತ್ರೆ, ವಿದ್ಯಾಸಂಸ್ಥೆ, ಧಾರ್ಮಿಕ ಕ್ಷೇತ್ರಗಳಲ್ಲಿ ಯಾವುದೇ ಪಕ್ಷದ ಬಗ್ಗೆ ಚುನಾವಣಾ ಪ್ರಚಾರ ನಡೆಸುವುದು ಸರಿಯಲ್ಲ. ಎಲ್ಲ ಜಾತಿ, ಧರ್ಮ, ಪಕ್ಷದವರನ್ನು ಸಮಾನವಾಗಿ ಕಾಣಬೇಕಾಗಿರುವ ವೈದ್ಯರು ಪಕ್ಷಕ್ಕೆ ಸೀಮಿತವಾಗುವುದು ಉತ್ತಮ ಬೆಳವಣಿಗೆಯಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಮತದಾನದಲ್ಲಿ ಒಂದು ಪಕ್ಷ ಅಥವಾ ವ್ಯಕ್ತಿಯನ್ನು ಆರಿಸುವ ಹಕ್ಕಿದೆ. ಆದರೆ, ಆಸ್ಪತ್ರೆಗಳಲ್ಲಿ ಈ ರೀತಿ ಚುನಾವಣಾ ಪ್ರಚಾರ ಸಭೆ ನಡೆಸಿರುವುದು ಖಂಡನೀಯ ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *