ವಿಟ್ಲ: ಎ.3ರಂದು ಮೈತ್ರೇಯೀ ಗುರುಕುಲದಲ್ಲಿ ಅರ್ಧಮಂಡಲೋತ್ಸವದ ನಿಮಿತ್ತ ಬ್ರಾಹ್ಮಶಕ್ತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾತಃಕಾಲದ ಶ್ರೀ ವಿದ್ಯಾ ಗಣಪತಿ ಹವನದ ಮೂಲಕ ಈ ಸಭೆಯು ಆರಂಭಗೊಂಡಿತು. ವೇದ, ವೇದಾಂತ, ಯೋಗ, ನ್ಯಾಯ, ವ್ಯಾಕರಣ, ಪೂರ್ವಮೀಮಾಂಸಾ ಇತ್ಯಾದಿ ಶಾಸ್ತ್ರಗಳಲ್ಲಿ ತಳಸ್ಪರ್ಶೀ ಜ್ಞಾನವನ್ನು ಹೊಂದಿದಂತಹ ವಿದ್ವಾಂಸರು ೫೫ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗುವುದರ ಮೂಲಕ ಸಭೆಯನ್ನು ಉದ್ಘಾಟಿಸಿದಂತಹ ವಿದುಷೀ ಉಷಾ ಚಡಗ, ಉಡುಪಿ ಇವರು ಹೆಣ್ಣುಮಕ್ಕಳೂ ಕೂಡ ವೇದಾದಿ ಶಾಸ್ತ್ರಗಳ ಅಧ್ಯಯನವನ್ನು ಮಾಡುತ್ತಾ ಸಮಾಜವನ್ನು ಮುನ್ನಡೆಸುವವರಾಗಬೇಕು ಎಂದು ಶುಭಾಶಂಸನೆಯನ್ನು ನೀಡಿದರು.
ನಂತರ ಪ್ರೊ|| ರಾಮಚಂದ್ರ ಭಟ್ ಕೋಟೆಮನೆ ಇವರ ಅಧ್ಯಕ್ಷತೆಯಲ್ಲಿ ನಡೆದಂತಹ ಶಾಸ್ತ್ರಾರ್ಥಸಭೆಯಲ್ಲಿ ಕುಮಾರಿ ಸಾಯಿರಶ್ಮಿ ಬ್ರಹ್ಮಸೂತ್ರದ ಸ್ಮೃತ್ಯಧಿಕರಣವನ್ನು, ಕುಮಾರಿ ಪೂರ್ಣಿಮಾ ವ್ಯಾಕರಣದ ‘ಅರ್ಥವದಧಾತುರಪ್ರತ್ಯಯಃ ಪ್ರಾತಿಪದಿಕಮ್’ ಎಂಬ ಸೂತ್ರದಲ್ಲಿ ಪ್ರತ್ಯಯಾಂತ ಪರ್ಯುದಾಸದ ಅಗತ್ಯತೆ ಎಂಬ ವಿಚಾರವನ್ನು ಪ್ರೌಢಮನೋರಮಾ ಗ್ರಂಥದ ಪ್ರಕಾರ ನಿರೂಪಿಸಿದರು. ನಿರೂಪಣೆಗೂ ಮೊದಲು ವಿದ್ವಾನ್ ಗಣೇಶ ಈಶ್ವರ ಭಟ್ ಇವರು ವೇದಾಂತದ ಹಾಗೂ ವಿದುಷೀ ಶ್ರೀಮತಿ ವಿಜಯಲಕ್ಷ್ಮೀ ಇವರು ವ್ಯಾಕರಣದ ಸ್ಥೂಲ ಪರಿಚಯವನ್ನು ಮಾಡಿಕೊಟ್ಟರು. ವಿದ್ಯಾರ್ಥಿನಿಯರ ವಿಷಯ ಮಂಡನೆಯ ನಂತರ ಸೇರಿದಂತಹ ವಿದ್ವಜ್ಜನರು ಸಂವಾದದ ಮೂಲಕ ಸ್ವಾಭಿಪ್ರಾಯವನ್ನು ಪ್ರಕಟಿಸಿದರು.
ಭೋಜನ ವಿರಾಮದ ನಂತರ ‘ರಾಷ್ಟ್ರನಿರ್ಮಾಣದಲ್ಲಿ ಶಾಸ್ತ್ರವಿದ್ವಾಂಸರ ಪಾತ್ರ’ ಎಂಬ ಸಂವಾದ ಗೋಷ್ಠಿಯು ಟಿ. ಎನ್. ಪ್ರಭಾಕರ ಅವರ ನೇತೃತ್ವದಲ್ಲಿ ಸಂಪನ್ನಗೊಂಡಿತು. ‘ದೋಷಜ್ಞರೆಂದು ಕರೆಸಿಕೊಳ್ಳುವ ವಿದ್ವಜ್ಜನರು ಎಲ್ಲರಿಗೂ ಜ್ಞಾನವನ್ನು ಧಾರೆಯೆರೆಯುತ್ತಾ ಸಮಾಜದ ಕುಂದು ಕೊರತೆಗಳನ್ನು ನೀಗಿಸಬೇಕು. ಸಮಾಜದಲ್ಲಿ ಸಾಮರಸ್ಯ, ಸೌಹಾರ್ದ, ಸೌಶೀಲ್ಯ, ಸೌಕರ್ಯ, ಸೌವಿಧ್ಯ, ಸೌಮನಸ್ಯ ಮತ್ತು ಸೌಜನ್ಯದ ವಾತಾವರಣವನ್ನು ನಿರ್ಮಿಸಬೇಕು’ ಎಂದು ಹೇಳುವ ಮೂಲಕ ಪ್ರಸ್ತಾವನೆಗೈದರು. ಸೇರಿದಂತಹ ವಿದ್ವಜ್ಜನರು ‘ನಾವೆಲ್ಲರೂ ಅವಶ್ಯವಾಗಿ ನಮ್ಮಲ್ಲಿರುವ ಜ್ಞಾನವನ್ನು ಹಂಚುತ್ತಾ ಮಾರ್ಗದರ್ಶನ ಮಾಡುವ ಮೂಲಕ ಸ್ವಸ್ಥ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಕೈ ಜೋಡಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು. ಸಮಾರೋಹದ ಸಂದರ್ಭದಲ್ಲಿ ವಿದ್ವಾನ್ ವೀರನಾರಾಯಣ ಪಾಂಡುರಂಗಿಯವರು ‘ಸಮಾಜದ ಅಂಗವಾದಂತಹ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ವಿಭಾಗಗಳು ವಿದ್ವಜ್ಜನರ ನೇತೃತ್ವದಲ್ಲಿ ನಡೆಯತಕ್ಕವು. ಪಾರಂಪರಿಕ ಶಿಕ್ಷಣವನ್ನು ಪಡೆಯುತ್ತಾ, ಹಂಚುತ್ತಾ ಸಮಾಜವನ್ನು ನಾವೆಲ್ಲರೂ ಮುನ್ನಡೆಸಬೇಕು. ಹಾಗೆಯೇ ತಂತ್ರಜ್ಞಾನದ ಮೂಲಕ ಅಥವಾ ಗುರುಕುಲದಲ್ಲಿಯೇ ವಾಸವಿದ್ದು ಅಥವಾ ತಮ್ಮ ವಾಸಸ್ಥಳಕ್ಕೆ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಶಾಸ್ತ್ರಜ್ಞಾನವನ್ನು ಅವರಿಗೆ ಧಾರೆಯೆರೆಯಬೇಕು’ ಎಂದು ನಿವೇದಿಸಿಕೊಂಡರು. ತದನಂತರ ವಿದ್ವಜ್ಜನರು ತುಂಬು ಹೃದಯದಿಂದ ವಿದ್ಯಾರ್ಥಿನಿಯರನ್ನು ಅನುಗ್ರಹಿಸಿದರು. ವಿಶಿಷ್ಟವಾದ ಈ ಸನ್ನಿವೇಶದಲ್ಲಿ ಪಾಲ್ಗೊಂಡಂತಹ ಎಲ್ಲರೂ ಪುಳಕಿತಗೊಂಡರು. ಶಾಂತಿ ಪಠನದೊಂದಿಗೆ ಕಾರ್ಯಕ್ರಮವು ಸಮಾಪ್ತಿಗೊಂಡಿತು.

