ಪೊಳಲಿ: ಜೀರ್ಣೋದ್ಧಾರಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿರುವ ಶ್ರೀಕ್ಷೇತ್ರಪಾಲ ದೈವದ ಮರದ ದಿವ್ಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ಗುರುವಾರ ಶ್ರೀಕ್ಷೇತ್ರ ಪೊಳಲಿಗೆ ತರಲಾಯಿತು.
ಪೊಳಲಿ ದೇವಸ್ಥಾನದ ಪಾಶ್ರ್ವದಲ್ಲಿ ಶ್ರೀಕ್ಷೇತ್ರಪಾಲ ಹಾಗೂ ಮಾತೆಯ ಗುಡಿ ಇದ್ದು ಇಲ್ಲಿ ಈ ಎರಡು ದೇವರ ಮರದ ಮೂರ್ತಿಗಳನ್ನು ಅರ್ಚಿಸಿಕೊಂಡು ಬರಲಾಗುತ್ತಿದೆ. ಕ್ಷೇತ್ರರಕ್ಷಕರಾಗಿ ಕರಣಿಕ ತೋರಿಸುವ ಕ್ಷೇತ್ರಪಾಲನ ಮರದ ಉಗ್ರ ಮೂರ್ತಿಗಳನ್ನು ಆರಾಧಿಸಿಕೊಂಡು ಬರಲಾಗುತ್ತಿದೆ. ಪೊಳಲಿ ಕ್ಷೇತ್ರ ಜೀರ್ಣೋದ್ಧಾರಗೊಳ್ಳುತ್ತಿರುವುದರಿಂದ ಹಳೆಯ ಮೂರ್ತಿಯನ್ನೇ ಹೋಲುವ ಮೂರ್ತಿಗಳನ್ನು ಕಲ್ಲಮುಂಡ್ಕೂರಿನ ನಾರಾಯಣ ಆಚಾರ್ಯ ಹಾಗೂ ಹರೀಶ್ ಆಚಾರ್ಯ ಅವರು ಕೆತ್ತನೆ ನಡೆಸಿದ್ದಾರೆ. ಈ ಮೂರ್ತಿಯನ್ನು ಹಲಸಿನ ಮರದಿಂದ ನಿರ್ಮಿಸಲು ಒಟ್ಟು ಆರು ತಿಂಗಳ ಅವಧಿಯಲ್ಲಿ ಮರದ ಕೆತ್ತನೆ ನಡೆದಿದೆ.
ಗುರುವಾರ ಕಲ್ಲಮುಂಡ್ಕೂರಿನಲ್ಲಿ ಪೂಜಾಕೈಂಕರ್ಯಗಳನ್ನು ನೆರವೇರಿಸಿ ಕೈಕಂಬ ರಸ್ತೆಯ ಮೂಲಕ ಮೆರವಣಿಗೆಯಲ್ಲಿ ಪೊಳಲಿಗೆ ತರಲಾಯಿತು. ಪೊಳಲಿ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮೂರ್ತಿಗಳನ್ನು ಕ್ಷೇತ್ರಪಾಲನ ನೂತನ ಗುಡಿಯಲ್ಲಿ ಇಡಲಾಯಿತು. ಧಾರ್ಮಿಕ ವಿಧಿವಿಧಾನಗಳ ಮೂಲಕ ಕ್ಷೇತ್ರಪಾಲನ ಪ್ರತಿಷ್ಠಾಪನೆ ನಡೆಯಲಿದೆ.

ಈ ಸಂದರ್ಭದಲ್ಲಿ ಉಧ್ಯಮಿ ರಾಜೇಶ್ ಪೈ, ಅಶೋಕ್ ಪೈ, ಗಣೇಶ್ ರಾವ್, ಸುಧೀಂದ್ರ ರಾವ್,ಮೂಡಬಿದಿರೆ ಅಲಂಗಾರ್ನ ತಪೋವನದ ಸುಬ್ಬಣ್ಣ ಭಟ್ , ವಾಸುದೇವ ಭಟ್,ವರುಣಾಕ್ಷ ಕೈಕಂಬ, ನವೀನ್ ಕೈಕಂಬ, ಸೋಹನ್ ಅಥಿಕಾರಿ, ಕಾಜಿಲ ಸದಾಶಿವ, ರಾಜೇಶ್ ಬಂಗೇರಾ, ಹರೀಶ್ ಮಟ್ಟಿ, ಸುಧಾಕರ್ ಕೊಳಂಬೆ, ಭಾಸ್ಕರ್ ಭಟ್, ಬಾಲಕೃಷ್ಣ ಪೊಳಲಿ, ದೀಕ್ಷಿತ್ ಮಳಲಿ, ಕುಮಾರ , ರವಿ ಕೈಕಂಬ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆ ಗುತ್ತು,ಮೊಕ್ತೇಸರ ಯು. ತಾರಾನಾಥ ಆಳ್ವ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಮಾಧವ ಭಟ್ ಮತ್ತು ಅರ್ಚಕ ವೃಂದದವರು, ಭಕ್ತವೃಂದದವರು ಇದ್ದರು.

