ವಿಟ್ಲ : ಜನವರಿ 05: ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಹಾಗೂ ಶ್ರೀ ದುರ್ಗಾ ಜಿಮ್ನ್ಯಾಶಿಯಂ ಮಾಣಿ ಇದರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಸಬ್ ಜೂನಿಯರ್ ಬಾಲಕ ಬಾಲಕಿಯರ ಪವರ್ ಲಿಫ್ಟಿಂಗ್ ಸ್ಪರ್ಧೆಗಳು -2019 ಇದರ ಉದ್ಘಾಟನಾ ಸಮಾರಂಭವು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ರಾಜೇಶ್ ನಾೈಯ್ಕ್ ಉಳಿಪಾಡಿಗುತ್ತು ಮಾತನಾಡಿ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿವೆ. ಮಾಣಿಯಂತಹ ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಮಟ್ಟದ ಸ್ಪರ್ಧೆ ನಡೆಯುತ್ತಿರುವುದು ಶ್ಲಾಘನೀಯ. ಗ್ರಾಮೀಣ ಪ್ರದೇಶದಲ್ಲಿನ ಯುವ ಪ್ರತಿಭೆಗಳಿಗೆ ಇಂತಹ ಸ್ಪರ್ಧೆಗಳು ಉತ್ತಮ ವೇದಿಕೆಯಾಗಿವೆ. ಕಠಿಣ ಪರಿಶ್ರಮದಿಂದ ಉತ್ತಮ ಸಾಧನೆಗೈದಾಗ ಶಾಲೆ ಮಾತ್ರವಲ್ಲದೆ ದೇಶಕ್ಕೆ ಹೆಸರು ತರಲು ಸಾಧ್ಯ ಎಂದರು.

ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಅಬ್ಬಾಸ್ ಅಲಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳು ಸೇರಿದಾಗ ವ್ಯಕ್ತಿತ್ವ ವಿಕಸನ ಸಾಧ್ಯ. ವಿದ್ಯಾರ್ಥಿಗಳಲ್ಲಿ ಪ್ರತಿಭೆ ಹಲವಾರು ರೂಪದಲ್ಲಿರಬಹುದು. ಆ ಪ್ರತಿಭೆಯನ್ನು ಗುರುತಿಸಿ ಪೋಷಿಸುವುದು ಶಿಕ್ಷಕರ ಹಾಗೂ ಪೋಷಕರ ಆದ್ಯ ಕರ್ತವ್ಯವಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಮಂಜುಳಾ ಮಾಧವ ಮಾವೆ ಮಾತನಾಡಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈಯಲು ಶಿಸ್ತು, ಸಂಯಮ, ಕ್ರೀಡಾ ಮನೋಭಾವ ಅತೀ ಅಗತ್ಯ. ರಾಜ್ಯ , ಅಂತಾರಾಜ್ಯ ಮಟ್ಟದಲ್ಲಿ ಸಾಧನೆಗೈದ ಕ್ರೀಡಾ ಪ್ರತಿಭೆಗಳಿಗೆ ಜಿಲ್ಲಾ ಪಂಚಾಯತ್ ವತಿಯಿಂದ ಸರ್ವರೀತಿಯ ಸಹಕಾರಗಳನ್ನು ಕೊಡಿಸಲು ನಾನು ಬದ್ಧಳಾಗಿದ್ದೇನೆ ಎಂದು ಆಶ್ವಾಸನೆ ನೀಡಿದರು.
ಮುಖ್ಯ ಅತಿಥಿಗಳಾದ ಶ್ರೀ ಸತೀಶ್ ಕುಮಾರ್ ಕುದ್ರೋಳಿ ಏಕಲವ್ಯ ಪ್ರಶಸ್ತಿ ವಿಜೇತರು, ಕಾರ್ಯದರ್ಶಿ ಪವರ್ ಲಿಫ್ಟಿಂಗ್ ಇಂಡಿಯಾ ಫೆಡರೇಶನ್ ಇವರು ಮಾತನಾಡಿ ಗ್ರಾಮೀಣ ಪ್ರದೇಶದ ಕ್ರೀಡಾಳುಗಳನ್ನು ಉತ್ತೇಜಿಸುವಲ್ಲಿ ಇಂತಹ ಸ್ಪರ್ಧೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಭಾರತ ಸರಕಾರದಿಂದ ಮಾನ್ಯತೆ ಪಡೆದಿರುವ ಈ ಕ್ರೀಡೆಯಲ್ಲಿ ಉತ್ತಮ ಸಾಧನೆಗೈದವರಿಗೆ ಹಲವಾರು ಪ್ರತಿಷ್ಠಿತ ಇಲಾಖೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯಬಲ್ಲುದು ಎಂದರು.

ಇನ್ನೋರ್ವ ಮುಖ್ಯ ಅತಿಥಿಯಾದ ಚೌಟ ಗ್ಯಾಸ್ ಏಜೆನ್ಸಿ ಪರಂಗಿಪೇಟೆ ಇದರ ಮಾಲಕರಾದ ಶ್ರೀ ಜಗನ್ನಾಥ ಚೌಟ ಮಾತನಾಡಿ ಎರಡು ದಿನಕಾಲ ನಡೆಯಲಿರುವ ಪವರ್ ಲಿಫ್ಟಿಂಗ್ ಸ್ಪರ್ಧೆಗಳು ಯಶಸ್ವಿಯಾಗಿ ನಡೆಯಲಿ ಸ್ಪರ್ಧಾಳುಗಳು ಉತ್ತಮ ಪ್ರದರ್ಶನ ನೀಡಿ ಗೆಲುವನ್ನು ತಮ್ಮದಾಗಿಸಿ ಎಂದು ಶುಭಕೋರಿದರು.
ಶ್ರೀ ದುರ್ಗಾ ಜಿಮ್ನ್ಯಾಶಿಯಂ ಮಾಣಿ ಇದರ ಸ್ಥಾಪಕ ಅಧ್ಯಕ್ಷರಾದ ಶ್ರೀ ಕಲ್ಲಾಜೆ ವಸಂತ ಕೆ.ರೈ, ಬಾಲವಿಕಾಸ ಟ್ರಸ್ಟ್ ನ ಕಾರ್ಯದರ್ಶಿಗಳಾದ ಶ್ರೀ ನಾರಾಯಣ ಶೆಟ್ಟಿ ಕೊಂಬಿಲ , ಟ್ರಸ್ಟಿ ಪುಷ್ಪರಾಜ್ ಹೆಗ್ಡೆ , ಆಡಳಿತಾಧಿಕಾರಿ ಸಿ.ಶ್ರೀಧರ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೇಸ್.ಪಿ.ಸಲ್ಡಾನಾ, ಶಿಕ್ಷಕ –ರಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಮಹೇಶ್ ಜೆ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಚಾಲಕ ಜೆ.ಪ್ರಹ್ಲಾದ್.ಶೆಟ್ಟಿ ಸ್ವಾಗತಿಸಿ , ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ .ವಿ.ಶೆಟ್ಟಿ ವಂದಿಸಿದರು. ಶಿಕ್ಷಕಿಯರಾದ ರಶ್ಮಿ ಫೆರ್ನಾಂಡಿಸ್, ಸುಧಾ ಎನ್ ರಾವ್ ಕಾರ್ಯಕ್ರಮ ನಿರ್ವಹಿಸಿದರು.

