ಬಂಟ್ವಾಳ : ಬಂಟ್ವಾಳ:ಕೇಂದ್ರದಲ್ಲಿ ಅಧಿಕಾರ ನಡೆಸುವವರೇ ಪ್ರಜಾಪ್ರಭುತ್ವ ಉಳಿಸಿ ಹೋರಾಟಕ್ಕೆ ಇಳಿದಿರುವುದು ವಿಪರ್ಯಾಸವಾಗಿದೆ.ತೈಲ, ಅಡುಗೆ ಅನಿಲ ಬೆಲೆ ಏರಿಕೆ ಹಾಗೂ ರಾಜ್ಯಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಜಿ ಎಸ್ ಟಿ ಯ ಪಾಲು ಸಮರ್ಪಕವಾಗಿ ನೀಡದಿರುವ ಪರಿಣಾಮವೇ ರಾಜ್ಯದಲ್ಲಿ ದರ ಏರಿಕೆಯ  ಪ್ರತಿಫಲನಗೊಂಡಿದೆ ಎಂಬುದನ್ನು ಜನ ಚೆನ್ನಾಗಿ ಅರ್ಥೈಸಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.


ಬಿ ಸಿ ರೋಡಿನಲ್ಲಿರುವ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್   ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗರ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ  ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಕ್ರಮಬದ್ದವಾಗಿ ಹಾಲಿನ ದರದಲ್ಲಿ ಏರಿಕೆ ಮಾಡಿದೆಯೇ ಹೊರತು ಜನರ ಹಿತ ಬಲಿಕೊಟ್ಟು ಶ್ರೀಮಂತರ ಹಿತ ಕಾಯುವ ಕೆಲಸವನ್ನು  ಯಾವತ್ತೂ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.


ಪೆಟ್ರೋಲ್‌, ಡೀಸೆಲ್ ದರ ಏರಿಕೆಯಿಂದ ಸಾಗಾಟ ವೆಚ್ಚ ಹೆಚ್ಚಾಗಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ರೈತರ ಹಿತದೃಷ್ಟಿಯಿಂದ ರಾಜ್ಯ ಸರಕಾರ ಹಾಲಿನ ದರ ಹೆಚ್ಚಿಸಿದರೂ, ಕೇಂದ್ರದ ಬಿಜೆಪಿ ಆಡಳಿತದಲ್ಲಿ ನಿರಂತರವಾಗಿ ಏರಿಕೆಯಾಗಿರುವ ಬೆಲೆಗಳ ಬಗ್ಗೆ ಬಿಜೆಪಿಯವರು ಮಾತನಾಡುತ್ತಿಲ್ಲ ಎಂದ ಅವರು ಕಾಂಗ್ರೆಸ್‌ ವಿರುದ್ಧ ಜನಾಂದೋಲನ ನಡೆಸುವ ಬದಲು ಕೇಂದ್ರ ಸರಕಾರ ಮೊದಲು ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಲಿ ಎಂದು ಸವಾಲು ಹಾಕಿದರು.


ಕೇಂದ್ರದ ಬಿಜೆಪಿ ಸರಕಾರ ಪೆಟ್ರೋಲಿನಲ್ಲಿ ಎಥೆನಾಲ್ ಅಂಶವನ್ನು ಗಣನೀಯ ಪ್ರಮಾಣದಲ್ಲಿ ಸೇರಿಸಿ ಜನರ ಮೇಲೆ ಬರೆ ಎಳೆದು ಎಥೆನಾಲ್ ಕಂಪೆನಿಯ ಹಿತ ಮಾತ್ರ ಬಯಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಸರಕಾರ ದೇಶದ ಬಡಜನರ ಹಿತಕ್ಕಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಮಾಜಿ ಸಿಎಂಸಿದ್ದರಾಮಯ್ಯರವರ ಅವಧಿಯಲ್ಲಿ ಹಲವು ನಿಗಮಗಳ ಕೋಟ್ಯಂತರರೂಪಾಯಿ ಸಾಲಮನ್ನಾ ಮಾಡಿರುವುದಾಗಲೀ, ಗ್ಯಾರಂಟಿ ಯೋಜನೆಗಳಾಗಲೀ ಇದೆಲ್ಲವೂ ಕಾಂಗ್ರೆಸ್‌ ಬಡ ಜನರಿಗೆ ಮಾಡಿರುವ ಮಹತ್ವದ ಯೋಜನೆಗಳಾಗಿದ್ದು, ಬಿಜೆಪಿ ಸರಕಾರ ಕಾಂಗ್ರೆಸ್‌ ಮಾಡಿರುವುದನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದು ಬಿಟ್ಟರೆ ಬಡ ಜನರಿಗೆ ಉಪಕಾರ ಮಾಡಿರುವುದು ಯಾವುದೂ ಇಲ್ಲ ಎಂದು ಟೀಕಾ ಪ್ರಹಾರಗೈದರು.
ಸುದ್ದಿಗೋಷ್ಠಿಯಲ್ಲಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರುಗಳಾದ ಚಂದ್ರಶೇಖರ ಭಂಡಾರಿ. ಬಾಲಕೃಷ್ಣ ಅಂಚನ್‌,
ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ ತುಂಬೆ,ಬೂಡಾ ಅಧ್ಯಕ್ಷ ಬೇಬಿ ಕುಂದರ್,ಪಕ್ಷದ ಮುಖಂಡರಾದ ಸುದೀಪ್ ಕುಮಾ‌ರ್ ಶೆಟ್ಟಿ, ಬಿ.ಎಂ ಅಬ್ಬಾಸ್ ಅಲಿ, ಐಡಾ ಸುರೇಶ್, ಅಬೂಬಕ್ಕರ್ ಸಿದ್ದೀಕ್, ಸಂಪತ್ ಕುಮಾ‌ರ್ ಶೆಟ್ಟಿ, ಜಯಂತಿ ಪೂಜಾರಿ, ಇಬ್ರಾಹಿಂ ನವಾಝ್, ಲವೀನಾ ಮೊರಾಸ್ ಮೊದಲಾದವರು ಜೊತೆಗಿದ್ದರು.

By Suddi9