ಬಂಟ್ವಾಳ: ತಾಲೂಕಿನ ಕಾಡಬೆಟ್ಟುಗುತ್ತು ಮನೆಯಲ್ಲಿ ಭಾನುವಾರ ಮಧ್ಯಾಹ್ನ ಪಂಜುರ್ಲಿ ದೈವಕ್ಕೆ ಹಗಲು ನೇಮೋತ್ಸವ ಮತ್ತು ಇಲ್ಲಿನ ಪಿಲಿಂಗಾಲು ಮೂರು ಎಕರೆ ಗದ್ದೆಯಲ್ಲಿ ಸಾಂಪ್ರದಾಯಿಕ ‘ಕಂಬಳ ಕೋರಿ ಪೂಕರೆ’ ಅಳವಡಿಸಿ ನೇಜಿ ನೆಡುವ ಸಂಭ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡರು.

ಇಲ್ಲಿರುವ ನಾಲ್ಕು ಜೈನ ಮನೆತನಕ್ಕೆ ಸಂಬಂಧಿಸಿದಂತೆ ಕಾಡಬೆಟ್ಟುಗುತ್ತಿನ ಮನೆಯಲ್ಲಿ ಪ್ರತೀ ವರ್ಷ ಮಧ್ಯಾಹ್ನ ಪಂಜುರ್ಲಿ ದೈವಕ್ಕೆ ವಾರ್ಷಿಕ ನೇಮೋತ್ಸವ ಮತ್ತು ಈ ದೈವಕ್ಕೆ ಸಂಬಂಧಿಸಿದ ಕಂಬಳಗದ್ದೆಯಲ್ಲಿ ಸಂಪ್ರದಾಯದಂತೆ ಕಂಬಳ ಕೋಣಗಳನ್ನು ಇಳಿಸಿ, ಎತ್ತರದ ರಥದ ಮಾದರಿ ರಚಿಸಿದ ಕೆಂಪು ಹೂವಿನಿಂದ ಅಲಂಕಾರಗೊಂಡ ಪೂಕರೆಯನ್ನು ಎಳೆದು ಗದ್ದೆಯ ಮಧ್ಯೆ ಭಾಗದಲ್ಲಿ ಅಳವಡಿಸುವ ದೃಶ್ಯ ವೀಕ್ಷಿಸಲು ಅಪಾರ ಮಂದಿ ಗದ್ದೆಯ ಸುತ್ತಲೂ ನೆರೆದಿದ್ದರು.
