ಬಂಟ್ವಾಳ: ವಿಶ್ವ ಮಧುಮೇಹ ದಿನಾಚರಣೆ 2026ರ ಪ್ರಯುಕ್ತ  ಫಾದರ್ ಮುಲ್ಲರ್ ಆಸ್ಪತ್ರೆ ಹಾಗೂ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು, ತುಂಬೆಯ ವಯಸ್ಕರ ಆರೋಗ್ಯ ಶುಶ್ರೂಷಾ ವಿಭಾಗದ ವತಿಯಿಂದ ಲಯನ್ಸ್ ಕ್ಲಬ್ ಬಂಟ್ವಾಳದ ಸಹಯೋಗದಲ್ಲಿ  ಬಿ.ಸಿ.ರೋಡಿನ ಲಯನ್ಸ್ ಸೇವಾ ಸಭಾಂಗಣದಲ್ಲಿ ಶನಿವಾರ ಜಾಗೃತಿ, ಶಿಕ್ಷಣ ಮತ್ತು ತಡೆಗಟ್ಟುವಿಕೆ ನಡೆಸಲಾಯಿತು.
ಲಯನ್ ಡಾ. ಮುಕುಂದ ಪ್ರಭು ಅವರು ಕಾರ್ಯಕ್ತಮ ಉದ್ಘಾಟಿಸಿ ಮಾತನಾಡಿ,  ಆರೋಗ್ಯವೇ ನಿಜವಾದ ಸಂಪತ್ತು. ಪ್ರತಿಯೊಬ್ಬರ ಜೀವನದಲ್ಲಿ ಆರೋಗ್ಯಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರಾಧ್ಯಾಪಕರಾದ ಡಾ. ಅಮಿತ್ ವಿಜಯ್ ಲಿಯೋನ್ ಡಿಸೋಜಾ ಅವರು ಮಧುಮೇಹದ ಪರಿಣಾಮಗಳು, ಅದರ ತೊಡಕುಗಳು, ಆರಂಭಿಕ ಪತ್ತೆ ಹಾಗೂ ಸೂಕ್ತ ಚಿಕಿತ್ಸೆಯ ಕುರಿತು ಮಾಹಿತಿ ನೀಡಿದರು.


ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮುಖ್ಯ ಆಹಾರ ತಜ್ಞೆ ಸ್ಯಾಂಡಿಸ್ ಜೋಸೆಫ್ ಅವರು ಮಧುಮೇಹ ನಿಯಂತ್ರಣದಲ್ಲಿ ಸಮತೋಲಿತ ಆಹಾರ, ಆರೋಗ್ಯಕರ ಜೀವನಶೈಲಿ ಹಾಗೂ ಸರಿಯಾದ ಆಹಾರ ಪದ್ಧತಿಯ ಕುರಿತು ಮಾಹಿತಿಯನ್ನು ನೀಡಿದರು.


ಬಂಟ್ವಾಳ ನಗರ ವೈದ್ಯಾಧಿಕಾರಿ ಡಾ. ಅಶ್ವಿನಿ, ಹಿರಿಯ ಆರೋಗ್ಯ ಅಧಿಕಾರಿ  ನೂರಾಬಿ ಶೇಕ್, ವಿನಯಾ ಎಸ್. ಭಟ್,ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸುವಿಧಾ ಕಾಮತ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರೀನಾ ವಿಲ್ಮಾ ಫ್ರಾಂಕ್ , ಪ್ರಾಧ್ಯಾಪಕರಾದ ಡಾ. ಪದ್ಮಕುಮಾರ್ ,ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷಲ. ವಸಂತ್ ಕುಮಾರ್ ಶೆಟ್ಟಿvಉಪಸ್ಥಿತರಿದ್ದರು.


ಇದೇ ವೇಳೆ ನರ್ಸಿಂಗ್ ವಿದ್ಯಾರ್ಥಿಗಳಿಂದ ಸಾರ್ವಜನಿಕರಿಗೆ ಮಧುಮೇಹದ ಕುರಿತು ರಸಪ್ರಶ್ನೆ, ಪಾತ್ರಾಭಿನಯ ಹಾಗೂ ಶೈಕ್ಷಣಿಕ ಪ್ರದರ್ಶನಗಳ ಮೂಲಕ ಜಾಗೃತಿ ಮೂಡಿಸಲಾಯಿತು. ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು. ಶಿಬಿರದಲ್ಲಿ ಸಾರ್ವಜನಿಕರಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣ,ರಕ್ತದೊತ್ತಡ , ಬಾಡಿ ಮಾಸ್ ಇಂಡೆಕ್ಸ್ ಹಾಗೂ ಇಸಿಜಿ  ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತಲ್ಲದೆ, ವೈದ್ಯಕೀಯ ಸಲಹೆ ಹಾಗೂ ಆಹಾರ ತಜ್ಞರಿಂದ ಆಹಾರ ಪದ್ಧತಿಯ ಕುರಿತು ಮಾರ್ಗದರ್ಶನ ನೀಡಲಾಯಿತು.


ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ, ತುಂಬೆಯ ನರ್ಸಿಂಗ್ ಸೂಪರಿಂಟೆಂಡೆಂಟ್  ಸಿಲ್ವಿಯಾ ನಿಶಾ ಲೋಬೋ ಅವರು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ  ತ್ರಿವೇಣಿ  ಯಂ .ಅವರು ವಂದಿಸಿದರು.  ಸಂಯೋಜಕರಾದ  ಜೇಸನ್ ಕರ್ಕಾಡಾ ಮತ್ತು  ಪ್ರಶಾಂತ್ ಲೋಬೊ ಅವರು ಸಹಕರಿಸಿದರು.
ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರಾದ ವೆನಿಸ್ಸಾ ಲೋಬೋ ಮತ್ತು ಮೇರಿಸ್ಸ ಅವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕು ಮೊದಲು ಬಿ.ಸಿ.ರೋಡು ನಾರಾಯಣ ಗುರು ವೃತ್ತದಿಂದ ಲಯನ್ಸ್ ಕ್ಲಬ್‌ವರೆಗೆ ಮಧುಮೇಹ ಜಾಗೃತಿ ಜಾಥಾ ನಡೆಯಿತು.ವೈದ್ಯರು, ನರ್ಸಿಂಗ್ ಸಿಬ್ಬಂದಿ, ವಿದ್ಯಾರ್ಥಿಗಳು, ಲಯನ್ಸ್ ಕ್ಲಬ್ ಸದಸ್ಯರು ಹಾಗೂ ಸಾರ್ವಜನಿಕರು  ಭಾಗವಹಿಸಿದರು. 

By Suddi9