ಗುರುಪುರ : ಕೈಕಂಬದ ಪೊಂಪೈ ಚರ್ಚ್ ಇದರ ವತಿಯಿಂದ ಜೂನ್ ಏಳರಂದು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಚರ್ಚಿನಿಂದ ಕೈ ಕಂಬ ಜಂಕ್ಷನ್ ವರೆಗೆ ಬೃಹತ್ ಸ್ವಚ್ಛತಾ ಅಭಿಯಾನ ನಡೆಯಿತು.
ಚರ್ಚಿನಲ್ಲಿ ಭಾನುವಾರದ ಪ್ರಾರ್ಥನೆ ಬಳಿಕ ಆಯೋಜಿಸಲಾದ ಸರಳ ಕಾರ್ಯಕ್ರಮದ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಧರ್ಮ ಗುರುಗಳ ಗುರುಗಳಾದ ರೆವೆರೆಂಡ್ ಫಾದರ್ ರುಡಾಲ್ಫ್ ರವಿ ಡೇಸ ಅವರು ಚಾಲನೆ ನೀಡಿದರು.

ಚರ್ಚಿನಿಂದ ಕೈಕಂಬ ಜಂಕ್ಷನ್ ವರೆಗೆ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಸುಮಾರು 3 ಕಿ.ಮೀ ಅಂತರದ ರಸ್ತೆ ಬದಿಯಲ್ಲಿ ಬಿದ್ದಿದ್ದ ಭಾರಿ ಪ್ರಮಾಣದ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಲಾಯಿತು. ಹೀಗೆ ಸುಮಾರು ಒಂದು ಲೋಡು ತ್ಯಾಜ್ಯ ಸಂಗ್ರಹಿಸಲಾಯಿತು. ಈ ಅಭಿಯಾನದಲ್ಲಿ ಗುರುಪುರ ಕೈಕಂಬ ಪೊಂಪೈ ಚರ್ಚ್ ವ್ಯಾಪ್ತಿಯ ನೂರಾರು ಕ್ರಿಶ್ಚಿಯನ್ ಬಂಧುಗಳು ಪಾಲ್ಗೊಂಡಿದ್ದರು.
ಬಳಿಕ ಗುರುಪುರ ಕೈಕಂಬ ಜಂಕ್ಷನ್ ನಲ್ಲಿ ಆಯೋಜಿಸಲಾದ ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಯಭಾರಿ ಎಂ ಎಸ್ ಸೀನ ಶೆಟ್ಟಿ ಅವರು ಮಾತನಾಡಿ, ಪರಿಸರವನ್ನು ಸ್ವಚ್ಛವಾಗಿ ಇರಬೇಕೆನ್ನುವ ಉದ್ದೇಶದಿಂದ ಚರ್ಚಿನಲ್ಲಿ ಪ್ರಾರ್ಥನೆ ಸಲ್ಲಿಸಿ ನೇರವಾಗಿ ರಸ್ತೆಗಳಿದು ತ್ಯಾಜ್ಯ ಸಂಗ್ರಹಿಸಲು ಮುಂದಾಗಿರುವುದು ದೇವರು ಮೆಚ್ಚುವ ಕೆಲಸವಾಗಿದೆ. ಮನುಷ್ಯರಿಗೆ ಈಗ ಕಸ ಕಂಠಕವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಭೂಮಿಯಲ್ಲಿ ಸೇರುವದರಿಂದ ನೀರಿನಲ್ಲಿ, ಮೀನಿನಲ್ಲಿ, ತರಕಾರಿಯಲ್ಲಿ ಮತ್ತು ನಮ್ಮ ಶರೀರದಲ್ಲಿ ಮೈಕ್ರೋ ಪ್ಲಾಸ್ಟಿಕ್ ಸೇರ್ಪಡೆಗೊಂಡಿದೆ. ನಾವು ಉತ್ತಮ ಆಹಾರ ಸೇವಿಸುವುದರಿಂದ ಸದ್ಯದ ಮಟ್ಟಿಗೆ ಕ್ಯಾನ್ಸರ್ ಹತೋಟಿಯಲ್ಲಿದೆ ಎಂದರು.

ಸ್ವಚ್ಛತೆ ಎಂದರೆ ಸಮೃದ್ಧಿ, ಸ್ವಚ್ಛತೆ ಎಂದರೆ ಅಭಿವೃದ್ಧಿ. ಪ್ಲಾಸ್ಟಿಕ್ ನಂತಹ ವಿಷಕಾರಿ ತ್ಯಾಜ್ಯ ಎಲ್ಲೆಡೆ ಎಸೆಯುವುದರಿಂದ ಮನುಕುಲಕ್ಕೆ ಕಂಟಕ ತಪ್ಪಿದ್ದಲ್ಲ. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು ಕಾನೂನುಬಾಹಿರ. ಹಸಿ ಒಣ ಹಾಗೂ ಅಪಾಯಕಾರಿ ಕಸ ಸಂಗ್ರಹಿಸುವ ಮತ್ತು ಅವುಗಳ ಸೂಕ್ತ ನಿರ್ವಹಣೆ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಗುರು ಫಾದರ್ ರುಡಾಲ್ಫ್ ರವಿ ದೇಸ ಅವರು ಮಾತನಾಡಿ, ನಮ್ಮ ಸುತ್ತಲ ಪರಿಸರ ಸ್ವಚ್ಛವಾಗಿರಬೇಕು ಎಂಬ ಅರಿವು ನಮ್ಮಲ್ಲಿರಬೇಕು. ಪ್ಲಾಸ್ಟಿಕ್ ಬಳಕೆ ಆದಷ್ಟು ಕಡಿಮೆ ಮಾಡಿ, ಪ್ಲಾಸ್ಟಿಕ್ ಅಪಾಯ ತಪ್ಪಿಸಬೇಕು. ನಾವು ಬದುಕಬೇಕು ನಮ್ಮ ಮುಂದಿನ ಪೀಳಿಗೆಯ ಬದುಕಬೇಕು ಎಂಬ ಎಚ್ಚರ ಇರಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು.

ಸ್ವಚ್ಛತಾ ಅಭಿಯಾನದ ಮುಂದಾಳತ್ವ ವಹಿಸಿದ್ದ ಪೊಂಪೈ ಚರ್ಚಿನ ಸಾಕ್ಷಿ ಆಯೋಗ ಪಂಗಡದ ಸಂಚಾಲಕಿ ಜೆಸಿಂತಾ ಡಿಕುನ್ನ ಅವರು ಸ್ವಾಗತಿಸಿ, ಪ್ರಸ್ತಾವಿಸಿದರು. ಶಿಕ್ಷಕಿ ಸಿಲ್ವಿಯ ರೊಡ್ರಿಗಸ್ ಅವರು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಜನ ಶಿಕ್ಷಣ ಟ್ರಸ್ಟ್ ಮುಡಿಪು ಇದರ ಕೃಷ್ಣ ಮೂಲ್ಯ, ಚರ್ಚಿನ ಪಾಲನಾ ಸಮಿತಿ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್, ಪಾಲನಾ ಸಮಿತಿಯ ಕಾರ್ಯದರ್ಶಿ ರಿಚರ್ಡ್ ಫರ್ನಾಂಡಿಸ್, ಚರ್ಚಿನ 22 ಆಯೋಗಗಳ ಸಂಯೋಜಕ ದಿನೇಶ್ ಕುವೆಲ್ಲೋ, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಚರ್ಚ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನದ ನೆನಪಿಗಾಗಿ ಪ್ರಕಟಿಸಲಾಗುವ ಪುಸ್ತಕದ ಘೋಷಣಾ ಪತ್ರವನ್ನು ಕ್ರಿಶ್ಚಿಯನ್ ಬಂಧುಗಳಿಗೆ ಹಸ್ತಾಂತರಿಸಲಾಯಿತು. ಮುಂದಿನ 30 ದಿನದ ಬಳಿಕ ಇದು ಒಂದು ಪುಸ್ತಕವಾಗಿ ಪ್ರಕಟಗೊಳ್ಳಲಿದೆ.

By suddi9

Leave a Reply

Your email address will not be published. Required fields are marked *