ಬಂಟ್ವಾಳ : ರಜಾ ಅವಧಿ ಕಳೆದು ಶಾಲೆಯು ತೆರೆದಿದೆ, ಹಬ್ಬದ ವಾತಾವರಣ ಮೂಡಿದೆ  ಸರ್ಕಾರಿ ಶಾಲೆಗಳು ಶಿಕ್ಷಣದಲ್ಲಿ ಉತ್ತಮ ಗುಣಮಟ್ಟವನ್ನು ಹೊಂದಿದ್ದು ಸಮಾಜದ ಎಲ್ಲಾ ವರ್ಗದ ಮಕ್ಕಳಿಗೂ ಸಮಾನ ಶಿಕ್ಷಣದ ಅವಕಾಶವನ್ನು ಒದಗಿಸುತ್ತಿವೆ, ಸರ್ಕಾರಿ ಶಾಲೆಗಳಲ್ಲಿ ಪಠ್ಯದ ಜೊತೆಗೆ ಮೌಲ್ಯ ಶಿಕ್ಷಣ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಜೀವನ ಕೌಶಲ್ಯಗಳಿಗೂ ಮಹತ್ವ ನೀಡಲಾಗುತ್ತಿದೆ   ವೀರಕಂಭ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ  ದಿನೇಶ್ ಹೇಳಿದ್ದಾರೆ.
ಅವರು ಸೋಮವಾರ ವೀರಕಂಭಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿಯಲ್ಲಿ2026 -27 ನೇ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಮೊದಲು ಶಾಲೆಯ ಎಲ್ಲಾ ಮಕ್ಕಳನ್ನು ಮೆರವಣಿಗೆ ಮೂಲಕ ಸ್ವಾಗತಿಸಿ ಹೂ ಸಿಂಪಡಿಸಿ ಬರಮಾಡಿಕೊಳ್ಳಲಾಯಿತು. ನಂತರ ಶಾಲಾ ‘ಅಕ್ಷಯ ಬುಟ್ಟಿಗೆ ” ಆರತಿ ಮಾಡಿ ಗಣ್ಯರು ಹಾಗೂ ಮಕ್ಕಳ ಪೋಷಕರು ತಾವು ತಂದ ಅಕ್ಷರ ದಾಸೋಹ ಸಾಮಗ್ರಿಗಳನ್ನು ತುಂಬಿಸಿದರು.
ಶಾಲಾ ಶಿಕ್ಷಕರು  ವಿಶೇಷವಾಗಿ ಈ ಸಾಲಿನಲ್ಲಿ  ನೂತನವಾಗಿ ಶಾಲೆಗೆ ದಾಖಲಾತಿ ಪಡೆದ ಮಕ್ಕಳು ಹಾಗೂ ಮಕ್ಕಳ ಪೋಷಕರಿಗೆ ಪನ್ನೀರು ಸಿಂಪಡಿಸಿ, ಹೂ ಸಮರ್ಪಿಸಿ, ಆರತಿ ಬೆಳಗಿ ತಮ್ಮ ತರಗತಿಗಳಿಗೆ  ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಸರಕಾರದಿಂದ ಸಿಗುವ ಉಚಿತ ಪಠ್ಯಪುಸ್ತಕ ವಿತರಿಸಲಾಯಿತು.

ರೋಟರಿ ಕ್ಲಬ್  ಬಿ.ಸಿ.ರೋಡ್ ಸಿಟಿ ಇದರ ವಲಯ ಸೇನಾನಿ ಗಣೇಶ್ ಶೆಟ್ಟಿ, ಜೆಸಿಐ ಬಿ.ಸಿ.ರೋಡು ಇದರ ಅಧ್ಯಕ್ಷರಾದ  ಕಿಶೋರ್ ಆಚಾರ್ಯ, ವೀರ ಕಂಬ ಗ್ರಾಮ ಪಂಚಾಯಿತಿನ ನಿಕಟಪೂವ೯ಉಪಾಧ್ಯಕ್ಷ ಜನಾರ್ಧನ ಪೂಜಾರಿ,ಹಿರಿಯ ವಿದ್ಯಾರ್ಥಿ ಪ್ರಗತಿಪರ ಕೃಷಿಕರಾದ ಜಯಪ್ರಕಾಶ್  ತೆಕ್ಕಿಪಾಪು, ಶಾಲೆಗೆ ಉಚಿತವಾಗಿ ತರಕಾರಿ ಪೂರೈಸುವ  ಚಂದ್ರಿಕಾ ವೆಜಿಟೇಬಲ್ಸ್  ಮೆಲ್ಕಾರ್ ಇದರ ಮಾಲಕರಾದ ಮಹಮದ್ ಶರೀಫ್, ಯುವ ವಾಹಿನಿ ಮಾಣಿ ಘಟಕ ಅಧ್ಯಕ್ಷರಾದ ಗಣೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕೊರಗಪ್ಪ ನಾಯ್ಕ, ಉಪಸ್ಥಿತರಿದ್ದರು.
ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು, ಮಕ್ಕಳ ಪೋಷಕರು, ಸಂಘ-ಸಂಸ್ಥೆಯ ಸದಸ್ಯರು, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸದಸ್ಯರುಗಳು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಲೆಯನ್ನು ತಳಿರು ತೋರಣ ಹಾಗೂ ಬೇಲೂನುಗಳ ಮೂಲಕ  ಶೃಂಗರಿಸಲಾಗಿತ್ತು.

ಶಾಲಾ ಮಕ್ಕಳು ಪ್ರಾರ್ಥಿಸಿ, ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸ ಪ್ರಸ್ತಾವನೆಗೈದು, ಸ್ವಾಗತಿಸಿದರು, ಶಿಕ್ಷಕ  ತೌಸೀಫ್ ಅಹ್ಮದ್
ಶಾಲಾ ನೀತಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕ ಇಂದುಶೇಖರ್  ವಂದಿಸಿದರು. ಹಿರಿಯ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರೋಪಿಸಿದರು. ಶಾಲಾ ಶಿಕ್ಷಕಿಯರು ಸಹಕರಿಸಿದರು. 

By suddi9

Leave a Reply

Your email address will not be published. Required fields are marked *