ಬೆಂಗಳೂರು: ರಸ್ತೆಗುಂಡಿಗಳಿಗೆ (Pothole) ದಿನಕ್ಕೊಂದು ಸಾವುಗಳಾಗುತ್ತಿವೆ. ಸರ್ಕಾರದ ಬೇಜವಾಬ್ದಾರಿತನ ಮಿತಿ ಮೀರಿದೆ. ರಸ್ತೆಗುಂಡಿಗಳಿಂದಾದ ಸಾವುಗಳನ್ನು ಸರ್ಕಾರಿ ಕೊಲೆ ಎಂದು ಪರಿಗಣಿಸಿ ಅಧಿಕಾರಿಗಳು, ಸಚಿವರನ್ನು ಆರೋಪಿಗಳನ್ನಾಗಿಸಿ ಪ್ರಕರಣ ದಾಖಲಿಸಬೇಕು. ಬೊಮ್ಮಾಯಿ (Basavaraj Bommai) ಅವರೇ, ನಿಮ್ಮ ‘ಮರಣಪಥ’ವನ್ನು ಸರಿಪಡಿಸುವ ದಮ್ಮು ತಾಕತ್ತು ತೋರಿಸುತ್ತಿಲ್ಲವೇಕೆ ಎಂದು ಕಾಂಗ್ರೆಸ್ (Congress) ಸರಣಿ ಟ್ವೀಟ್ ಮೂಲಕ ಕಿಡಿಕಾರಿದೆ.

ಟ್ವೀಟ್‍ನಲ್ಲಿ ಏನಿದೆ?
ಸಿನೆಮಾ ಪ್ರಿಯ ಬೊಮ್ಮಾಯಿ ಅವರು ಪ್ರತಿದಿನವೂ ಥೇಟ್ ಸಿನೆಮಾ ಶೈಲಿಯಲ್ಲಿ ದಮ್ಮು ತಾಕತ್ತಿನ ಡೈಲಾಗ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ ಮುಖ್ಯಮಂತ್ರಿಗಳೇ, ಸಿನೆಮಾ ಗುಂಗು ಬಿಟ್ಟು ವಾಸ್ತವ ಜಗತ್ತಿನಲ್ಲಿ ಕಣ್ಬಿಟ್ಟು ನೋಡಿ, ರಸ್ತೆ ಗುಂಡಿಗಳು ಕಾಣುತ್ತವೆ. ಪ್ರಾಣ ಬಿಟ್ಟವರ ಕುಟುಂಬದ ರೋಧನೆ ಕಾಣುತ್ತದೆ. ನಿಮ್ಮ ವೈಫಲ್ಯಗಳು ಕಾಣುತ್ತವೆ.

ಬೆಂಗಳೂರು (Bengaluru) ಉಸ್ತುವಾರಿಗಾಗಿ ಕಿತ್ತಾಡುವ ಸಚಿವರು ರಸ್ತೆಗುಂಡಿ ಮುಚ್ಚುವ ವಿಚಾರದಲ್ಲಿ ಅದೇ ಹೋರಾಟ ತೋರುತ್ತಿಲ್ಲವೇಕೆ? ‘ಬೊಮ್ಮಾಯಿ ವರ್ಷನ್ ಅಚ್ಛೆ ದಿನಗಳ’ ಭಾಷಣ ಕುಟ್ಟುವ ಬೊಮ್ಮಾಯಿ ಅವರೇ, ಕನಿಷ್ಠ ರಸ್ತೆ ಗುಂಡಿಗಳನ್ನು ಮುಚ್ಚಲು ಸಹ ನಿಮಗೆ ದಮ್ಮು ತಾಕತ್ತು ಇಲ್ಲದಾಗಿರುವುದೇಕೆ? ನಿಮ್ಮ ಪ್ರಲಾಪ ಮೈಕ್ ಮುಂದೆ ಮಾತ್ರವೇ?
ಮೋದಿಯವರ (Narendra Modi) ಆರ್ಥಿಕತೆಯಲ್ಲಿ ರಾಜ್ಯದ ಕಂದಾಯ ಸಚಿವರಿಗೂ ಪಕೋಡಾ ಮಾರುವ ಸ್ಥಿತಿ ಬಂದಿದೆ! ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್‍ಟಿ ಬಾಕಿ ಕೊಡಲಿಲ್ಲ, ಯೋಜನೆಗಳಿಗೆ ಅನುದಾನ ಕೊಡಲಿಲ್ಲ, ಕನ್ನಡಿಗರಿಗೆ ನಿಲ್ಲದ ಅನ್ಯಾಯಕ್ಕಾಗಿ ಈ ಸ್ಥಿತಿಯೇ ಆರ್.ಅಶೋಕ್ (R.Ashok) ಅವರೇ?
ಪಕೋಡಾ ಅಂಗಡಿ ಭದ್ರಗೊಳಿಸಿ, ಚುನಾವಣೆಯ ನಂತರ ಉಪಯೋಗಕ್ಕೆ ಬರಲಿದೆ! ಬಿಜೆಪಿಗೆ ತಿಳಿದಿರುವುದು ಕನ್ನ ಹಾಕುವುದು ಮಾತ್ರ, ಅನ್ನ ಹಾಕುವುದಲ್ಲ. 20 ಕ್ಯಾಂಟೀನ್‍ಗಳಿಗೆ ಬೀಗ ಹಾಕಿದ ಬೊಮ್ಮಾಯಿ ಅವರೇ, ಬಡವರ ಹಸಿವಿಗೂ ಬೀಗ ಹಾಕುವಿರಾ? ಬಡವರ ಬದುಕನ್ನೂ ಮುಚ್ಚುವಿರಾ? ಬಡವರ ಹೊಟ್ಟೆಗೆ ಹೊಡೆಯುವುದೇ ನಿಮ್ಮ ದಮ್ಮು, ತಾಕತ್ತೇ? ಜನಪರ ಯೋಜನೆ ರೂಪಿಸುವುದಿರಲಿ, ಇರುವುದನ್ನು ಉಳಿಸದಿರುವುದೇಕೆ? 5 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಲಿದೆ ಎಂದು ಮಾತಿನಲ್ಲಿ ಮುತ್ತಿನ ಹಾರ ಪೋಣಿಸುವ ಬೊಮ್ಮಾಯಿ ಅವರೇ, ನಿಮ್ಮ ರಸ್ತೆಗುಂಡಿಗಳು ಹೂಡಿಕೆದಾರರಿಗೆ ಆಕರ್ಷಣೆಯೇ? 40% ಕಮಿಷನ್‍ನಿಂದಾಗಿ ಬ್ರಾಂಡ್ ಬೆಂಗಳೂರು ಕಳೆದುಹೋಗಿದೆ. ಹೂಡಿಕೆದಾರರು ಇತರ ರಾಜ್ಯದತ್ತ ಮುಖ ಮಾಡುತ್ತಿದ್ದಾರೆ. ಇಂತಹ ಅವಮಾನಕರ ಸ್ಥಿತಿ ನಿರ್ಮಿಸಿದ್ದು ನಿಮ್ಮ ಸಾಧನೆಯೇ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
