ಬಂಟ್ವಾಳ: ಹಿರಿಯ ನಾಗರಿಕರ ಕ್ಷೇಮಾಭಿವೃದ್ದಿ ಕಾಳಜಿ ಸಹಿತ ಹಲವು ಆರ್ಥಿಕ ಚಟುವಟಿಕೆಗಳಿಗೆ ನೆರವು ನೀಡುವ ಯೋಜನೆಗಳೊಂದಿಗೆ ಪಾಣೆಮಂಗಳೂರಿಗೆ ಸಮೀಪದ ಮೇಲ್ಕಾರ್ ನ ಎಂ.ಎಚ್. ಹೈಟ್ಸ್ ನಲ್ಲಿ ಆ.21ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ “ಶ್ರೀ ಶಂಕರ ಪತ್ತಿನ ಸಹಕಾರ ಸಂಘ ನಿ”. ಶುಭಾರಂಭಗೊಳ್ಳಲಿದೆ.
ಈ ಬಗ್ಗೆ ಸಂಘದ ಮುಖ್ಯ ಪ್ರವರ್ತಕ ಕೈಯೂರು ನಾರಾಯಣ ಭಟ್ ಮೇಲ್ಕಾರ್ ನಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಕೊರೋನ ಮಹಾಮಾರಿಯ ಹಿನ್ನಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಸಂಘದ ಕಚೇರಿಯನ್ನು ಸಾಂಕೇತಿಕವಾಗಿ ದೀಪಪ್ರಜ್ವಲನಗೈದು ಉದ್ಘಾಟಿಲಿದ್ದಾರೆ, ಅಧ್ಯಕ್ಷತೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ವಹಿಸಲಿದ್ದು,ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಭದ್ರತಾ ಕೊಠಡಿಯನ್ನು ಹಾಗೂ ಮಾಜಿ ಸಚಿವ ರಮಾನಾಥ ರೈ ಗಣಕಯಂತ್ರ ಉದ್ಘಾಟನೆ ಮಾಡಲಿದ್ದು, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ಎಂ.ಎಚ್.ಹೈಟ್ಸ್ ನ ಮಾಲಕ ಮಹಮ್ಮದ್ ಇಕ್ಬಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು.
1000 ಸದಸ್ಯರ ಗುರಿಯನ್ನು ಹೊಂದಿದ್ದು ಈಗಾಗಲೇ ಸುಮಾರು 600ಕ್ಕಿಂತಲೂ ಅಧಿಕ ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದೆ. 13 ಮಂದಿ ಸಹ ಪ್ರವರ್ತಕರು ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲಿದ್ದು,ಶೀಘ್ರದಲ್ಲಿ ಯೇ ಆಡಳಿತಮಂಡಳಿ ಅಸ್ತಿತ್ವಕ್ಕೆ ಬರಲಿದೆ. ಸಿಬ್ಬಂದಿಗಳ ನೇಮಕಾತಿ ನಡೆದಿದೆ ಎಂದು ತಿಳಿಸಿದರು. ಸಹಪ್ರವರ್ತಕರಾದ ಜಯಾನಂದ ಪೆರಾಜೆ, ಜಯರಾಮ ಪೂಜಾರಿ, ಮುರಳೀಧರ ರಾವ್, ಎಂ.ಈಶ್ವರ ಭಟ್, ವೇದಮೂರ್ತಿ ಸುದರ್ಶನ ಮಯ್ಯ ಕೊಳಕೆ ಸುದ್ದಿಗೋಷ್ಡಿಯಲ್ಲಿ ಉಪಸ್ಥಿತರಿದ್ದರು.

