ಕೈಕಂಬ: ದಲಿತ ಸಮುದಾಯದ ಮನೆಗಳಿಗೆ ರಸ್ತೆ ಸಂಪರ್ಕಕ್ಕಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಮನೆಯನ್ನು ತೆರವುಗೊಳಿಸುವಂತೆ ದಲಿತ ಕುಟುಂಬ ಧರಣಿ ಕುಳಿತ ಪ್ರಸಂಗ ಕುಪ್ಪೆಪದವಿನಲ್ಲಿ ಬುಧವಾರ ನಡೆದಿದೆ.
ಕಿಲೆಂಜಾರು ಗ್ರಾಮದ ಪಾಕಜೆ ಎಂಬಲ್ಲಿ ಡಿ.ಸಿ. ಮನ್ನಾ ಜಾಗದಲ್ಲಿ ವಾಸಿಸುತ್ತಿರುವ ಮನೆಗಳಿಗೆ ರಸ್ತೆ ಸಂಪರ್ಕಕ್ಕಾಗಿ ಮೀಸಲಿಟ್ಟಿದ್ದ ಜಾಗವನ್ನು ಒತ್ತುವರಿ ಮಾಡಿ ಅಬ್ದುಲ್ ರಹಿಮಾನ್ ಎಂಬವರು ಮನೆ ನಿರ್ಮಿಸಿದ್ದು, ಇದನ್ನು ತೆರವುಗೊಳಿಸುವಂತೆ ಗಣೇಶ್ ಪಾಕಜೆ ಎಂಬವರು ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಿದ್ದರು ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳೂರು ತಹಶೀಲ್ದಾರ್ ಅವರಿಗೆ ಸೂಚಿಸಲಾಗಿತ್ತು.
ತನಿಖೆ ನಡೆಸಿದ್ದ ತಹಸೀಲ್ದಾರ್ ಅವರು ಅತಿಕ್ರಮವನ್ನು ತೆರವುಗೊಳಿಸುವಂತೆ ಅಬ್ದುಲ್ ರಹಿಮಾನ್ ಅವರಿಗೆ ನೋಟೀಸ್ ಜಾರಿ ಮಾಡಿದ್ದರು.ತಹಸೀಲ್ದಾರ್ ಅವರ ನೋಟೀಸ್ ವಿರುದ್ಧ ಅಬ್ದುಲ್ ರಹಿಮಾನ್ ಹೈಕೋರ್ಟ್ ಮೆಟ್ಟಲೇರಿದ್ದರು ಆದರೆ ಹೈಕೋರ್ಟ್ ಒತ್ತುವರಿಯನ್ನು ತೆರವುಗೊಳಿಸುವಂತೆ ಆದೇಶ ನೀಡಿತ್ತು. ಅಧಿಕಾರಿಗಳು ಹಲವು ಬಾರಿ ಮನೆಯನ್ನು ತೆರವುಗೊಳಿಸುವಂತೆ ಅಬ್ದುಲ್ ರಹಿಮಾನ್ ಅವರಿಗೆ ನೋಟೀಸ್ ನೀಡಿದ್ದರೂ ಮನೆ ತೆರವು ಮಾಡಿರಲಿಲ್ಲ. ನ್ಯಾಯಾಲಯ ಅತಿಕ್ರಮವಾಗಿ ನಿರ್ಮಿಸಲಾಗಿರುವ ಕಟ್ಟಡವನ್ನು ತೆರವುಗೊಳಿಸುವಂತೆ ನೀಡಿದ್ದ ಆದೇಶ ಪಾಲನೆಯಾಗದ ಕಾರಣ ಗಣೇಶ್ ಪಾಕಜೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅವರು ಅತಿಕ್ರಮಣವನ್ನು ತೆರವುಗೊಳಿಸಲು ಬುಧವಾರ ಅಂತಿಮ ಗಡುವು ನೀಡಿ ನೋಟೀಸ್ ಜಾರಿ ಮಾಡಿದ್ದು ಉಪತಹಶೀಲ್ದಾರ್ ಶಿವಪ್ರಸಾದ್, ಕಂದಾಯ ನಿರೀಕ್ಷಕ ನವನೀತ್ ಮಾಳವ ಸ್ಥಳಕ್ಕೆ ಭೇಟಿ ನೀಡಿದ್ದು ಮನೆಯನ್ನು ತೆರವುಗೊಳಿಸಲು ಸೂಚಿಸಿದ್ದರು ಆದರೆ ಅಬ್ದುಲ್ ರಹಿಮಾನ್ ಮನೆ ತೆರವುಗೊಳಿಸಲು ಹೆಚ್ಚಿನ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಮನೆ ತೆರವುಗೊಳಿಸುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ವಿಶ್ವನಾಥ ಪಾಕಾಜೆ ಮತ್ತು ಗಣೇಶ್ ಪಾಕಾಜೆ ನೇತೃತ್ವದಲ್ಲಿ ದಲಿತ ಕುಟುಂಬ ಅತಿಕ್ರಮವಾಗಿ ನಿರ್ಮಿಸಲಾದ ಮನೆಯ ಅಂಗಳದಲ್ಲಿ ಧರಣಿ ಕುಳಿತರು.
ಈ ವೇಳೆ ತೀವ್ರವಾದ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಕಂಡುಬAದ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರುಗಳು, ಗ್ರಾಮ ಪಂಚಾಯತ್ ಅಧ್ಯಕ್ಷ, ಸದಸ್ಯರು, ಅಭಿವೃದ್ಧಿ ಅಧಿಕಾರಿ, ಗ್ರಾಮಕರಣಿಕರು ಚರ್ಚೆ ನಡೆಸಿ ಅಬ್ದುಲ್ ರಹಿಮಾನ್ ಅವರಿಗೆ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತ್ಯೇಕ ಮನೆ ನಿವೇಶನ ಗುರುತಿಸಿ ಮನೆ ನಿರ್ಮಾಣಕ್ಕಾಗಿ ೪೫ ದಿನಗಳ ಕಾಲಾವಕಾಶ ನೀಡಿ ಈ ಬಗ್ಗೆ ಲಿಖಿತವಾಗಿ ಭರವಸೆ ನೀಡಿದ ಧರಣಿಯನ್ನು ಹಿಂದಕ್ಕೆ ಪಡೆಯಲಾಯಿತು. ಬಜಪೆ ಪೊಲೀಸರು ಸ್ಥಳದಲ್ಲಿ ಹಾಜರಿದ್ದರು.
