ಅಡ್ಡೂರು: ಗುರುಪುರ ಗ್ರಾಮ ಪಂಚಾಯತ್, ಅಡ್ಡೂರು ಫೈವ್ ಸ್ಟಾರ್ ಯಂಗ್ ಬಾಯ್ಸ್(ರಿ) ಹಾಗೂ ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಎಂಎಸ್‍ಡಬ್ಲ್ಯೂ ವಿದ್ಯಾರ್ಥಿಗಳು ಶನಿವಾರ ಗ್ರಾಪಂ ವ್ಯಾಪ್ತಿಯ ಅಡ್ಡೂರು ಜಂಕ್ಷನಿನಿಂದ ಗರಡಿ ಜಂಕ್ಷನಿನವರೆಗೆ `ಸ್ವಚ್ಛತಾ ಹೀ ಸೇವಾ-ಅಡ್ಡೂರು ಗ್ರಾಮ’ ಸ್ವಚ್ಛತಾ ಆಂದೋಲನ ಕಾರ್ಯಕ್ರಮದಡಿ ಸ್ವಚ್ಚತಾ ಕಾರ್ಯ ನಡೆಯಿತು.
ರಸ್ತೆ ಗುಡಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ಸ್ವಚ್ಛತೆ ವಿಷಯದಲ್ಲಿ ಈ ಗ್ರಾಮ ಪಂಚಾಯತ್ ಇತರ ಗ್ರಾಮಗಳಿಗೆ ಮಾದರಿಯಾಗಬೇಕು. ಇಂದಿಲ್ಲಿ ಆರಂಭಿಸಿ ಸ್ವಚ್ಛತಾ ಕಾರ್ಯ ಭವಿಷ್ಯದಲ್ಲಿ ಅಡ್ಡೂರಿನ ಜನತೆಯಿಂದ ಮುಂದರಿಯಬೇಕು. ಮನೆಯಿಂದ ಸ್ವಚ್ಛತೆ ಆರಂಭವಾಗಲಿ ಎಂದರು.
ಗ್ರಾಪಂ ಪಿಡಿಒ ಅಬೂಬಕ್ಕರ್ ಮಾತನಾಡಿ ನಮ್ಮ ಈ ಕಾರ್ಯಕ್ರಮ ಜನರ ಸಹಕಾರದಿಂದ ಮುಂದುವರಿಯಲು ಮತ್ತು ಜನಮಾನಸದಲ್ಲಿ ನೆನಪಿನಲ್ಲಿ ಉಳಿಯಲು ಸಾಧ್ಯವಿದೆ. ಸ್ವಚ್ಚತೆ ಮೇಲೆ ನಿಗಾ ಇಡಲು ಗ್ರಾಪಂ ಆಡಳಿತವು ಸಂಘ-ಸಂಸ್ಥೆಗಳ ನೆರವಿನಿನೊಂದಿಗೆ ಗಸ್ತು ಪಡೆಯೊಂದು ರಚಿಸಲು ಯೋಚಿಸಿದೆ ಎಂದರು.
ಈ ಸಂದರ್ಭದಲ್ಲಿ ಸೈಂಟ್ ಅಲೋಶಿಯಸ್ ಕಾಲೇಜಿನ ಎಂಎಸ್‍ಡಬ್ಲ್ಯೂ ವಿದ್ಯಾರ್ಥಿ ತಂಡದ ನಾಯಕಿ ಫಿಲೋಮಿನಾ ಫೆರ್ನಾಂಡಿಸ್ ಮಾತನಾಡುತ್ತ, “ನಾವು ಕ್ಷೇತ್ರಕಾರ್ಯಕ್ಕೆ ಆಯ್ಕೆ ಮಾಡಿಕೊಂಡಿರುವ ಗುರುಪುರ ಗ್ರಾಪಂ ಆಡಳಿತದಿಂದ ಸ್ವಚ್ಚತೆಗೆ ಹೆಚ್ಚಿನ ನೀಡುತ್ತಿರುವುದು ಅನುಭವಕ್ಕೆ ಬಂದಿದೆ. ಈ ಕಾರ್ಯಕ್ರಮದಲ್ಲಿ ಸಮುದಾಯಗಳ ಪಾಲ್ಗೊಳ್ಳುವಿಕೆ ಅತ್ಯವಶ್ಯ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ ಎಂ ಉದಯ ಭಟ್, ತಾಪಂ ಸದಸ್ಯ ಸಚಿನ್ ಅಡಪ, ಸದಸ್ಯರಾದ ಎ ಕೆ ಆಶ್ರಫ್, ಸದಾಶಿವ ಶೆಟ್ಟಿ ಕೆ, ಶೋಭಾ, ಮೊಹಮ್ಮದ್, ಜಯಲಕ್ಷ್ಮೀ, ಆಶಾ ಕಾರ್ಯಕರ್ತರಾದ ಸಿಂತಿಯಾ, ಸುಗಂಧಿ, ಶಶಿಕಲಾ, ವಿನೋದಾ, ಶೀಲಾ ಮೊದಲಾದವರು ಇದ್ದರು. ಅಡ್ಡೂರಿನ ಪ್ರತಿಯೊಂದು ಅಂಗಡಿಗಳ ಮುಂದಿದ್ದ ಕಸ ತೆರವುಗೊಳಿಸಲಾಯಿತು. ಕೆಲವು ಅಂಗಡಿ ಮಾಲಕರಿಗೆ ಕಸ ವಿಲೇವಾರಿ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಲಾಯಿತು. ದಿನಪೂರ್ತಿ ಸ್ವಚ್ಛತಾ ಕಾರ್ಯ ನಡೆಯಿತು.
