ಗುರುಪುರ : ಗುರುಪುರ ಗ್ರಾಪಂ ವ್ಯಾಪ್ತಿಯ ನೂಯಿ ಎಂಬಲ್ಲಿ ಗುರುವಾರ(ಜುಲೈ 12) ಬೆಳಗ್ಗೆ ಭಾರೀ ಗುಡ್ಡ ಜರಿದು ಮನೆಯ ಬಾವಿ ನೆಲಸಮವಾಗಿದ್ದು, ಆವರಣ ಗೋಡೆ ಕುಸಿದಿದೆ. ಈ ಪ್ರಕೃತಿ ವಿಪತ್ತಿನಲ್ಲಿ ಎರಡು ಮನೆಗಳಿಗೆ ಅಪಾಯ ಉಂಟಾಗಿದೆ.
ಭಾರೀ ಮಳೆಗೆ ಗುಡ್ಡದಿಂದ ಮೇಲ್ಭಾಗದಿಂದ ಭಾರೀ ಮಣ್ಣು ಮತ್ತು ಬಂಡೆ ಕುಸಿದು ಬಿದ್ದು, ಪ್ರೇಮನಾಥ ಎಂಬವರ ಮನೆ ಬಾವಿ ಮುಚ್ಚಿ ಹೋಗಿದೆ. ಕೆಲವು ದಿನಗಳ ಹಿಂದೆ ಇಲ್ಲಿ ಸಣ್ಣ ಪ್ರಮಾಣದ ಗುಡ್ಡ ಕುಸಿದಿತ್ತು. ಇಂದು ಗುಡ್ಡದ ಮಣ್ಣಿನೊಂದಿಗೆ ಬಂಡೆ ಕಲ್ಲುಗಳೂ ಉರುಳಿವೆ. ಕುಸಿದ ಬಂಡೆ ಕಲ್ಲುಗಳು ಮನೆಯ ಆವರಣ ಗೋಡೆ ಮತ್ತು ಮನೆಯ ಇತರ ಕೆಲವು ಸೊತ್ತುಗಳನ್ನು ಧ್ವಂಸಗೊಳಿಸಿದೆ. ಮಣ್ಣು ಅಂಗಳಕ್ಕೆ ಜಾರಿದೆ. ಹತ್ತಿರದ ಮಹಾಬಲ ಎಂಬವ ಮನೆಯ ಪಕ್ಕಕ್ಕೂ ಮಣ್ಣು ಜಾರಿದೆ.
ಗುರುಪುರ ಗ್ರಾಪಂ ಪಿಡಿಒ ಅಬೂಬಕ್ಕರ್ ಮತ್ತು ಗ್ರಾಮ ಕರಣಿಕರ ಕಚೇರಿ ಸಿಬ್ಬಂದಿ ಅಶ್ರಫ್ ಹಾಗೂ ಗ್ರಾಪಂ ಸದಸ್ಯ ರಾಜೇಶ್ ಸುವರ್ಣ, ಬಿಜೆಪಿ ನಾಯಕರಾದ ಶ್ರೀಕರ ಶೆಟ್ಟಿ, ಹರೀಶ್ ಬಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯ ಮುಂದುವರಿದಿದೆ.
