ಡೆಹ್ರಾಡೂನ್(ಉತ್ತರಾಖಂಡ): ದಲಿತ ಮಹಿಳೆಯರ ಮೇಲೆ ಹಲ್ಲೆಗೈದು , ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ರುದ್ರಾಪುರದ ಬಿಜೆಪಿ ಶಾಸಕ ರಾಜಕುಮಾರ್ ತುಕ್ರಾಲ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ರುದ್ರಾಪುರದ ತಮ್ಮ ನಿವಾಸದಲ್ಲಿ ಎರಡು ಕುಟುಂಬಗಳ ನಡುವಿನ ಕಲಹಕ್ಕೆ ಸಂಬಂಧಿಸಿದಂತೆ ರಾಜಿ ಪಂಚಾಯತಿ ನಡೆಸುವ ಸಂದರ್ಭ ಮಾರ್ಚ್ 9 ರಂದು ಘಟನೆ ನಡೆದಿದೆ. ಒಂದು ಕುಟುಂಬದ ಬಾಲಕ ಇನ್ನೊಂದು ಕುಟುಂಬದ ಬಾಲಕಿಯೊಂದಿಗೆ ಪರಾರಿಯಾಗಿದ್ದೇ ಈ ಕಲಹಕ್ಕೆ ಕಾರಣವಾಗಿತ್ತು.
ಶಾಸಕರು ಪತ್ನಿ ಮಾಲಾ, ಪುತ್ರಿಯರಾದ ಪೂಜಾ ಹಾಗೂ ಸೋನಂ ಮತ್ತು ತಮ್ಮ ಮೇಲೆ ಹಲ್ಲೆಗೈದಿದ್ದಾರೆ ಎಂದು ಅಪ್ರಾಪ್ತ ಬಾಲಕನ ತಂದೆ ರಾಮ್ ಕಿಶೋರ್ ರುದ್ರಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಾಸಕ ಮೂವರ ಮೇಲೆ ಹಲ್ಲೆ ನಡೆಸುವ ವೀಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ‘‘ರಾಜಿ ಪಂಚಾಯತಿ ಸಂದರ್ಭ ಎರಡು ಕುಟುಂಬಗಳೂ ಜಗಳಕ್ಕೆ ಶುರುವಿಟ್ಟುಕೊಂಡಿದ್ದವು. ಪರಿಸ್ಥಿತಿ ನಿಯಂತ್ರಿಸಲು ಮಧ್ಯ ಪ್ರವೇಶಿಸಬೇಕಾಯಿತು. ಈ ಸಂದರ್ಭ ಆ ವೀಡಿಯೊ ಚಿತ್ರೀಕರಿಸಲಾಗಿದೆ’’ ಎಂದು ಸಮಜಾಯಿಷಿ ನೀಡಿದ್ದಾರೆ.
ಈ ವಿವಾದದ ಸಂಬಂಧ ರವಿವಾರ ಶಾಸಕಗೆ ನೋಟಿಸ್ ಜಾರಿಗೊಳಿಸಿದ್ದು, ಹತ್ತು ದಿನಗಳೊಳಗಾಗಿ ಉತ್ತರಿಸುವಂತೆ ತಾಕೀತು ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಅಜಯ್ ಭಟ್ಟ್ ಹೇಳಿದ್ದಾರೆ. ಶಾಸಕ ನೀಡಿದ ಉತ್ತರದ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

