ಪೊಳಲಿ: ಪರಿಸರ ಉಳಿದರೆ ಮಾತ್ರ ಜೀವ ಸಂಕುಲ ಉಳಿಯುತ್ತದೆ ಇಲ್ಲವಾದರೆ ಕೆಲವೇ ಸಮಯದಲ್ಲಿ ಜೀವ ಸಂಕುಲ ಅಳಿವಿನಂಚಿನಲ್ಲಿ ಸಿಲುಕುವುದರಲ್ಲಿ ಸಂದೇಹವಿಲ್ಲ ಎಂದು ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಅಭಿಪ್ರಾಯಪಟ್ಟರು. ಅವರು ಭಾನುವಾರ ಕಮ್ಮಾಜೆಯ ನಾಗಶ್ರೀ ಮಿತ್ರ ವೃಂದದ ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿಗಳನ್ನು ಗ್ರಾಮಸ್ಥರಿಗೆ ವಿತರಿಸುತ್ತಾ ಮಾತನಾಡಿದರು.
ಸಕಲ ಜೀವಿಗಳಿಗೂ ಮರಗಿಡಗಳು ಅಮೃತವಿದ್ದಂತೆ ತಾವು ವಿಷಾನಿಲವನ್ನು ಸೇವಿಸಿ ಜೀವಿಗಳಿಗೆ ಅತ್ಯಮೂಲ್ಯವಾದ ಆಮ್ಲಜನಕವನ್ನು ನೀಡುತ್ತವೆ ಆದರೆ ಮಾನವನ ದುರಾಸೆಯಿಂದ ಇಂದು ಕಾಡುಗಳು ನಶಿಸಿ ಹೋಗುತ್ತಿವೆ ಆದ್ದರಿಂದ ನಾವೆಲ್ಲರೂ ಗಿಡಮರಗಳನ್ನು ಬೆಳೆಸಿ ರಕ್ಷಿಸಬೇಕೆಂದು ಕರೆ ನೀಡಿದರು. ಈ ನಿಟ್ಟಿನಲ್ಲಿ ನಾಗಶ್ರೀ ಮಿತ್ರ ವೃಂದದ ಸದಸ್ಯರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು ವನಮಹೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗದಂತೆ ಮನೆ ಮನೆಗೆ ಸಸಿಗಳನ್ನು ವಿತರಿಸಿ ಪರಿಸರ ಉಳಿವಿಗೆ ಉತ್ತಮವಾಗಿ ಶ್ರಮಿಸುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ತಾಲ್ಲೂಕು ಪಂಚಾಯತ್ ಸದಸ್ಯ ಯಶವಂತ ಪೊಳಲಿ, ಬಡಗಬೆಳ್ಳೂರು ಗ್ರಾಮ ಪಂಚಾಯತ್ ಸದಸ್ಯೆ ರೂಪಾ, ನಾಗಶ್ರೀ ಮಿತ್ರ ವೃಂದದ ಅಧ್ಯಕ್ಷ ತಿರುಮಲೇಶ್ ಬೆಳ್ಳೂರು ಉಪಸ್ಥಿತರಿದ್ದರು. ಸಂದೀಪ್ ಕಮ್ಮಾಜೆ ಸ್ವಾಗತಿಸಿ ನಿರೂಪಿಸಿದರು.










