ಬಂಟ್ವಾಳ: ಬಿಸಿರೋಡ್ ಕೈಕುಂಜೆ ಪರಿಸರದಲ್ಲಿ ರಿಕ್ಷಾ ಮತ್ತು ಕಾರು ಪಾರ್ಕಿಂಗ್ ಮಾಡುವ ಬಗ್ಗೆ ಪುರಸಭೆಯ ವತಿಯಿಂದ ತೀರ್ಮಾನ ಕೈಗೊಂಡಿದ್ದು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪುರಸಭೆಯ ಅಧ್ಯಕ್ಷ ರಾಮಕೃಷ್ಣ ಆಳ್ವ ಹೇಳಿದರು.
ಅವರು ಬಿಸಿರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಬಿ.ಯಂ.ಎಸ್. ಸಂಯೋಜಿತ ಮೋಟಾರ್ ಮತ್ತು ಜನರಲ್ ಮಜ್ದೂರ್ ಸಂಘದ ಘಟಕ ಬಿಸಿರೋಡ್ ಇದರ ಅಟೋ ರಿಕ್ಷಾ ಚಾಲಕ-ಮಾಲಕರ ಸಂಘದ 28ನೇ ವಾರ್ಷಿಕ ಮಹಾ ಸಭೆ ಉದ್ಘಾಟಿಸಿ ಮಾತನಾಡಿದರು. ಬಿಸಿರೋಡಿನ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಸೂಕ್ತವಾದ ಈ ವ್ಯವಸ್ಥೆಯನ್ನು ಮಾಡುವ ಚಿಂತನೆ ಮಾಡಲಾಗಿದೆ. ರಿಕ್ಷಾ ಚಾಲಕರ ಸಹಕಾರ ಕೂಡಾ ಬೇಕಾಗಿದೆ ಎಂದರು. ರಿಕ್ಷಾ ಚಾಲಕರಿಗೆ ವೃತ್ತಿಯ ಬಗ್ಗೆ ಕೀಳರಿಮೆ ಬೇಡ ಎಂದು ಹೇಳಿದರು. ಅಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ವಸಂತ್ ಕುಮಾರ್ ವಿ. ಮಣಿಹಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಟ್ರಾಫಿಕ್ ಎಸೈ ಚಂದ್ರಶೇಖರಯ್ಯ ಅವರು ಸಂಘಟನೆಯಿಂದಾಗಿ ಶಿಸ್ತು ಮತ್ತು ವಿಮರ್ಶಾತ್ಮಕ ಗುಣ ಬೆಳೆಯಲು ಸಾಧ್ಯ, ಆ ಮೂಲಕ ಸಾರ್ವಜನಿಕ ಸೇವೆಯಲ್ಲಿ ನಿಮ್ಮನ್ನು ಗುರುತಿಸಿಕೊಳ್ಳಲು ಪೂರಕವಾದ ವಾತಾವರಣ ನಿರ್ಮಾನವಾಗುತ್ತದೆ ಎಂದರು. ಬಿ.ಯಂ.ಎಸ್ ರಾಜ್ಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಮಾತನಾಡಿ ಬಂಟ್ವಾಳ ನಗರ ಮತ್ತು ಗ್ರಾಮಾಂತರ ರಿಕ್ಷಾ ಚಾಲಕರ ನಡುವೆ ಇರುವ ಗೊಂದಲ ಮತ್ತು ಸಮಸ್ಯೆಯ ಬಗ್ಗೆ ರಿಕ್ಷಾ ಚಾಲಕರನ್ನು ವಿಶ್ವಾಸಕ್ಕೆ ಪಡೆದುಕೊಂಡು ಸಮಸ್ಯೆ ಬಗೆಹರಿಸುವಂತೆ ಟ್ರಾಫಿಕ್ ಎಸೈ ಅವರಲ್ಲಿ ವಿನಂತಿಸಿಕೊಂಡರು. ವೇದಿಕೆಯಲ್ಲಿ ಸಂಘದ ಕಾನೂನು ಸಲಹೆಗಾರ ವಕೀಲರಾದ ಪಿ ಜಯರಾಮ ರೈ ಎಲ್.ಐ.ಸಿ ಎಜೆಂಟ್ ವಸಂತ ಪ್ರಭು ಬಂಟ್ವಾಳ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಕಾನೂನು ಸಲಹೆಗಾರ, ಟ್ರಾಫಿಕ್ ಎಸೈ ಮತ್ತು ಹಿರಿಯ ಇಬ್ಬರು ರಿಕ್ಷಾ ಚಾಲಕರನ್ನು ಗುರುತಿಸಿ ಗೌರವಿಸಲಾಯಿತು.
ಬಿ.ಯಂ.ಎಸ್ ನ ಮಾಜಿ ಅಧ್ಯಕ್ಷ ಸದಾನಂದ ಗೌಡ ಸ್ವಾಗತಿಸಿ ವಂದಿಸಿದರು. ಶಂಕರ್ ಬಡ್ಡಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

