ಕೈಕಂಬ: ಮೂಡುಪೆರಾರ ಪಂಚಾಯತ್ ಆಡಳಿತ ಮಂಡಳಿ ಗ್ರಾಮಸ್ಥರಿಗೆ ಮೂಲಭೂತ ವ್ಯವಸ್ಥೆ ಕಲ್ಪಿಸಲು ವಿಫಲವಾಗಿದೆ ಎಂದು ಆರೋಪಿಸಿ ಇಂದು ನಡೆಯಬೇಕಾಗಿದ್ದ ಗ್ರಾಮಸ್ಥರ ಪ್ರತಿಭಟನೆ ರದ್ದುಗೊಂಡಿದೆ. ಗ್ರಾಮಸ್ಥರ ಹಲವು ಬೇಡಿಕೆಗೆ ಪಂಚಾಯತ್ ಒಪ್ಪಿದ ಪರಿಣಾಮ ಈ ಪ್ರತಿಭಟನೆ ರದ್ದುಗೊಳ್ಳುವಂತಾಗಿದೆ.
ನೀರಿನ ಅಸಮರ್ಪಕ ಪೂರೈಕೆ ಇತ್ಯಾದಿ ಮೂಲಭೂತ ಸೌಲಭ್ಯ ಕಲ್ಪಿಸಲು ಪಂಚಾಯತ್ ವಿಫಲವಾಗಿದೆ ಎಂದು ಆರೋಪಿಸಿ  ಮಾ.21ರಂದು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದರು. ಪ್ರತಿಭಟನೆಯ ಮಾಹಿತಿ ಪಡೆದ ಪಂ. ಅಧ್ಯಕ್ಷೆ ಶಾಂತಾ ಅವರು ಶಾಸಕ ಮೊಯ್ದೀನ್ ಬಾವ ಅವರ ಸಮ್ಮುಖದಲ್ಲಿ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿ ಮನವೊಲಿಕೆ ನಡೆಸಿದ್ದಾರೆ. ಈ ವೇಳೆ ಗ್ರಾಮಸ್ಥರು ಪಂಚಾಯತ್‍ಗೆ ಹಲವು ಬೇಡಿಕೆ ಇಟ್ಟಿದ್ದರು.
ಅವುಗಳ ಪೈಕಿ, ನೀರಿಗೆ ಮೀಟರ್ ಅಳವಡಿಸದೇ ಇರುವುದು, ನೀತಿಗೆ ಹೆಚ್ಚುವರಿ ತೆರಿಗೆ ವಿಧಿಸದೆ ಯಥಾ ಸ್ಥಿತಿ ಕಾಯಬೇಕು. ಪಂಚಾಯತ್‍ಗೆ ಮೂಡುಪೆರಾರದ ಮಹಿಳೆಯೋರ್ವರರನ್ನು ಸಿಬ್ಬಂದಿಯಾಗಿ ನಿಯೋಜಿಸಬೇಕು ಹಾಗೂ ಮೂಡುಪೆರಾರದ ಗ್ರಾಮ ಸಭೆಯನ್ನು ಪ್ರತ್ಯೇಕ ನಡೆಸಬೇಕು ಎಂಬೆಲ್ಲಾ ಬೇಡಿಕೆಗೆ ಪಂಚಾಯತ್ ಒಪ್ಪಿದ ಪರಿಣಾಮ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರೆ.
ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೃಥ್ವಿರಾಜ್, ಮಾಜಿ ಜಿ.ಪಂ. ಅಧ್ಯಕ್ಷ ಕೃಷ್ಣ ಅಮೀನ್, ಗಣೇಶ್ ಪೂಜಾರಿ, ಮಾಜಿ ಪಂ. ಅಧ್ಯಕ್ಷ ಪದ್ಮನಾಭ, ಪ್ರತಿಭಟನಾಕಾರರ ಪರವಾಗಿ ರಫೀಕ್ ದರ್ಬಾರ್. ಲೋಕೇಶ್ ಸಾಲ್ಯಾನ್. ಲಿಂಗಪ್ಪ ಮುಂಡೇವು, ಭಾಸ್ಕರ್ ಮಲ್ಲಿ ಮತ್ತಿತರರು ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.

By Suddi9

Leave a Reply

Your email address will not be published. Required fields are marked *