ಬಂಟ್ವಾಳ:  ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನಡಲಾಗಿದ್ದು, ಮುಂದಿನ ದಿನಗಳಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಸ್ವಚ್ಛತೆಯ ಉದ್ದೇಶದಿಂದ ರಾಯಭಾರಿಯನ್ನು ನೇಮಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಪುರಸಭಾ ವ್ಯಾಪ್ತಿಯ ಸಂಚಯಗಿರಿಯಲ್ಲಿ ಭಾನುವಾರ ಸಂಜೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು. ನಿರ್ಮಲ ಬಂಟ್ವಾಳ ಯೋಜನೆಯಡಿ ಬಂಟ್ವಾಳ ಪುರಸಭೆಗೆ ವಿಶೇಷ ಅನುದಾನ ಮಂಜೂರಾಗಿದ್ದು, ಸ್ವಚ್ಛತೆಯ ಕಾರ್ಯಗಳಿಗೆ ಅನುಕೂಲ ಒದಗಿಸುವ ವಾಹನಗಳ ಖರೀದಿ, ಸಾಮಾಗ್ರಿಗಳ ಖರೀದಿ ನಡೆಸಲಾಗಿದೆ. ಹಾಗಿದ್ದೂ ನಿರೀಕ್ಷಿತ ಮಟ್ಟದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ ಅವರು,ಮುಖ್ಯಾಧಿಕಾರಿ ಸುಧಾಕರ್ ಅವರ ನೇತೃತ್ವದಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ವಿವಿಧ ಸ್ವಚ್ಛತಾಕಾರ್ಯ ಗಳ ಆಂದೋಲನ ನಡೆಯಲಿದ್ದು,ಸಾರ್ವಜನಿಕರು ಸಂಘ ಸಂಸ್ಥೆಗಳು ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.

4 (1)

1 (1)

2ಬಂಟ್ವಾಳ ಪುರಸಭೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದ್ದು, ತಾಲೂಕಿನ ಕೇಂದ್ರಭಾಗವಾದ ಬಿ.ಸಿ.ರೋಡಿನಲ್ಲಿ ಈ ವರ್ಷ ನಡೆಯುವ ಮಿನಿವಿಧಾನ ಸೌಧ, ಟ್ರೀಪಾರ್ಕ್, ಸರ್ಕಾರಿ ಬಸ್ ನಿಲ್ದಾಣ, ಪ್ರವಾಸಿ ಬಂಗಲೆ, ಸರ್ಕಾರಿ ಆಸ್ಪತ್ರೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೊದಲಾದ ವಿವಿಧ ಅಭಿವೃದ್ದಿ ಕಾರ್ಯಗಳು ಬಿ.ಸಿ.ರೋಡಿಗೆ ಹೊಸ ಕಳೆಯನ್ನು ತಂದುಕೊಡಲಿದೆ ಎಂದರು.
ಇದೇ ವೇಳೆ ಸಂಚಯಗಿರಿಯ ಶ್ರೇಯೋಭೀವೃದ್ದಿಗೆ ಶ್ರಮಿಸುತ್ತಿರುವ ದಾಮೋದರ್ ಅವರನ್ನು ವಾರ್ಡಿನ ಜನತೆಯ ಪರವಾಗಿ ಸಚಿವ ರೈ ಸನ್ಮಾನಿಸಿದರು. ಬಂಟ್ವಾಳ ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುರಸಭಾ ಸದಸ್ಯರಾದ ವಾಸುಪೂಜಾರಿ, ಗಂಗಾಧರ್, ಚಂಚಲಾಕ್ಷಿ, ಜೆಸಿಂತಾ, ಪ್ರಭಾ ಆರ್ ಸಾಲ್ಯಾನ್, ನೋಬರ್ಟ್ ರೋಡ್ರಿಗಸ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಅಬ್ಬಾಸ್ ಆಲಿ, ಮಾಯಿಲಪ್ಪ ಸಾಲ್ಯಾನ್, ಬಂಟ್ವಾಳ ಎಸ್‍ವಿಎಸ್ ಕಾಲೇಜಿನ ಪ್ರಾಂಶುಪಾಲ ಪಾಂಡುರಂಗ ನಾಯಕ್, ಉಪಪ್ರಾಂಶುಪಾಲ ತುಕಾರಾಮ ಪೂಜಾರಿ, ಪುರಸಭಾ ಮುಖ್ಯಾಧಿಕಾರಿ ಸುಧಾಕರ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಮೊದಲಾದವರು ಉಪಸ್ಥಿತರಿದ್ದರು. ಪುರಸಭಾ ಸದಸ್ಯ ಸದಾಶಿವ ಬಂಗೇರ ಸ್ವಾಗತಿಸಿದರು. ಸಂಕಪ್ಪ ಮಾಸ್ಟರ್ ವಂದಿಸಿದರು. ಲಿಂಗಪ್ಪ ಮಾಸ್ತರ್ ಕಾರ್ಯಕ್ರಮ ನಿರ್ವಹಿಸಿದರು.
ಇದೇ ವೇಳೆ ಸಚಿವರು, 14 ಲಕ್ಷ ರೂ ವೆಚ್ಚದ ಶಾಂತಿಯಂಗಡಿ ನೇಸರ ಮುದ್ರಣ ರಸ್ತೆ ಅಭಿವೃದ್ದಿ, 2 ಲಕ್ಷ ರೂ ವೆಚ್ಚದ ಮೊಡಂಕಾಪು ರಸ್ತೆ ಅಭಿವೃದ್ದಿ, 4 ಲಕ್ಷ ರೂ ವೆಚ್ಚದ ಕುರ್ಸುಗುಡ್ಡೆ ರಸ್ತೆ ಅಭಿವೃದ್ದಿ, 4 ಲಕ್ಷ ರೂ ವೆಚ್ಚದ ಬಂಟುಗುರಿ ರಸ್ತೆ ಅಭಿವೃದ್ದಿ, 5 ಲಕ್ಷ ರೂ ವೆಚ್ಚದ ಕೈಕಂಬ ರಸ್ತೆ ಅಭಿವೃದ್ದಿ ಕಾಮಗಾರಿ, ಹಾಗೂ 14 ಲಕ್ಷ ರೂ ವೆಚ್ಚದ ಸಂಚಯಗಿರಿ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.ಹಾಗೂ ಸಂಚಯಗಿರಿಯಲ್ಲಿ ಹೈಮಾಸ್ಟ್ ದೀಪ ವನ್ನು ಉದ್ಘಾಟಿಸಿದರು.

 

By Suddi9

Leave a Reply

Your email address will not be published. Required fields are marked *