ಬಂಟ್ವಾಳ : ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಗಾಗಿ ಬೈಪಾಸ್ ನಿರ್ಮಾಣದ ಬಗ್ಗೆ ಇರುವ ಪ್ರಸ್ತಾಪವನ್ನು ಕೈಬಿಡುವಂತೆ ಬಾಳ್ತಿಲ ಹಾಗೂ ಗೋಳ್ತಮಜಲು ಗ್ರಾಮದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೈಪಾಸ್ ರಸ್ತೆ ನಿರ್ಮಾಣಕ್ಕೆ ಇರುವ ಆಕ್ಷೇಪ ಹಾಗೂ ಗ್ರಾಮಸ್ಥರ ಅಹವಾಲು ಸ್ವೀಕಾರದ ಸಭೆ ಶುಕ್ರವಾರ ಸಂಜೆ ಕಲ್ಲಡ್ಕ ಹಿ.ಪ್ರಾ.ಶಾಲೆಯಲ್ಲಿ ನಡೆದಿದ್ದು, ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು, ಮೇಲ್ಸೇತುವೆ ನಿರ್ಮಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ರಾ.ಹೆ.ಪ್ರಾಧಿಕಾರದ ಭೂ ಸ್ವಾದೀನ ಸಹಾಯಕ ಕಮಿಷನರ್ ಮಂಜುನಾಥ್ ಹಾಗೂ ಮಂಗಳೂರು ಸಹಾಯಕ ಆಯುಕ್ತ ಡಾ.ಅಶೋಕ್ ಸಮ್ಮುಖದಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರಲ್ಲದೆ, ಗ್ರಾಮಸ್ಥರ ಬೇಡಿಕೆಯನ್ನು ಪರಿಗಣಿಸದೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಮುಂದಾದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎ.ರುಕ್ಮಯ ಪೂಜಾರಿಯವರು, ಕಲ್ಲಡ್ಕಕ್ಕೆ ಸಂಬಂಧಿಸಿ ಬೈಪಾಸ್ ರಸ್ತೆ ನಿರ್ಮಾಣದ ಕಲ್ಪನೆಯೇ ಅವೈಜ್ಞಾನಿಕವಾಗಿದ್ದು, ಹೆದ್ದಾರಿ ಪ್ರಾಧಿಕಾರ ನಡೆಸಿರುವ ಸರ್ವೆ ಕಾರ್ಯದಿಂದ ಗ್ರಾಮಸ್ಥರಲ್ಲಿ ಆತಂಕವುಂಟಾಗಿದೆ. ಒನದು ವೇಳೆ ಬೈಪಾಸ್ ರಸ್ತೆ ನಿರ್ಮಾಣವಾದಲ್ಲಿಅಧಿಕ ಖರ್ಚು ತಗಲುವುದು ಮಾತ್ರವಲ್ಲದೆ, ನೂರಾರು ಕುಟುಂಬಗಳು ನಿರಾಶ್ರಿತರಾಗಬೇಕಾಗುತ್ತದೆ ಎಂದರು.
ಈ ಇಂದೆಯೇ ಯೋಜಿಸಿದಂತೆ ಕಲ್ಲಡ್ಕ ಪೇಟೆ ಮೂಲಕವೇ ಚತುಷ್ಪಥ ಹಾದು ಹೋಗಲಿ ಎಂದ ಸಲಹೆ ನೀಡಿದ ಅವರು, ಪಿಲ್ಲರ್ ಮೂಲಕ ಮೇಲ್ಸೇತುವೆ ನಿರ್ಮಾಣದಿಂದ ಕಲ್ಲಡ್ಕ ಪೇಟೆಗೂ ಯಾವುದೇ ಹಾನಿಯಿಲ್ಲ ಎಂದವರು ಅಭಿಪ್ರಾಯಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಗ್ರಾಮಸ್ಥರ ಬೇಡಿಕೆಯನ್ನು ಮೇಲಧಿಕಾರಿಗಳಿಗೆ ಕಳುಹಿಸಿ ಅವರ ನಿರ್ದೇ ಶನದಂತೆ ಮುಂದುವರಿಯುವುದಾಗಿ ತಿಳಿಸಿದರು.
ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ಅಧಿಕಾರಿ ನಾರಾಯಣ ಪೂಜಾರಿ, ಎ.ಪಿ.ಭಟ್,ರಾ.ಹೆ. ಪ್ರಾಧಿಕಾರ ಕಂದಾಯ ಅಧಿಕಾರಿ ರಂಗನಾಥ್ ಈ ಸಂದರ್ಭ ಉಪಸ್ಥಿತರಿದ್ದರು.
ಜಿ.ಪಂ.ಸದಸ್ಯ ಚೆನ್ನಪ್ಪಕೋಟ್ಯಾನ್, ತಾ.ಪಂ.ಸದಸ್ಯ ದಿನೇಶ್ ಅಮ್ಟೂರು, ,ಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ವಿಠಲ , ಪ್ರಮುಖರಾದ ನಾರಾಯಣ ಸೋಮಯಾಜಿ, ಮೋಹನ್ ಪಿಎಸ್, ಕ,.ಕೃಷ್ಣಪ್ಪ, ಸುರೇಶ್ ಶೆಟ್ಟಿ, ಶ್ರೀಪತಿ ಭಟ್, ನಾಗೇಶ್ ಕಲ್ಲಡ್ಕ, ರಾಜೇಶ್ ಕೊಟ್ಟಾರಿ, ಚಂದ್ರಶೇಖರ್, ಪ್ರಕಾಶ್, ಬಿ.ಕೆಅಣ್ಣುಪೂಜಾರಿ, ಜಯಾನಂದ ಆಚಾರ್ಯ, ಯತಿನ್ ಕುಮಾರ್ ಎಲ್ತಿಮಾರ್, ಹರೀಶ್ ಸಹಿತ ಇತರ ಅನೇಕ ಮಂದಿ ಪ್ರಮುಖರು ಉಪಸ್ಢಿತರಿದ್ದರು.
