ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಪ್ರಮುಖ ವೃತ್ತದ ನಾಮಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪುರಸಭಾ ಸದಸ್ಯರೊಬ್ಬರಿಂದ ಶುಕ್ರವಾರ ಇನ್ನೊಂದು ಹೆಸರಿನ ಮನವಿ ಸಲ್ಲಿಕೆಯಾಗಿದೆ.
ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನವು ಪುರಸಭಾ ವ್ಯಾಪ್ತಿಯಲ್ಲಿ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಇಲ್ಲಿನ ಪುರಸಭಾ ವ್ಯಾಪ್ತಿಯ ಬಹುತೇಕ ಮಂದಿ ಯಾವುದೇ ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಈ ದೇವಸ್ಥಾನಕ್ಕೆ ಸಂಬಂಧಪಟ್ಟ ಜಮೀನಿನಲ್ಲಿ ವಾಸವಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಬಗ್ಗೆ ವಿಶೇಷ ಗೌರವ ಹೊಂದಿದ್ದಾರೆ.
ಇದರಿಂದಾಗಿ ಬಿ.ಸಿ.ರೋಡ್ ಪ್ರಮುಖ ವೃತ್ತಕ್ಕೆ ‘ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ವೃತ್ತ’ ಎಂದು ನಾಮಕರಣಗೊಳಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಭಂಡಾರಿಬೆಟ್ಟು 8ನೇ ವಾರ್ಡ್ ನ ಪುರಸಭಾ ಸದಸ್ಯ ಜಗದೀಶ್ ಕುಂದರ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು ಸಹಿತ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ತಹಶೀಲ್ದಾರ್ ಪುರಂದರ ಹೆಗ್ಡೆ, ಬೂಡ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್, ಪುರಸಭಾಧ್ಯಕ್ಷೆ ವಸಂತಿ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಇವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಈಗಾಗಲೇ ವಿವಿಧ ಸಂಘಟನೆಗಳು ಸ್ವಾಮಿ ವಿವೇಕಾನಂದ ವೃತ್ತ, ಕವಿ ಪಂಜೆ ಮಂಗೇಶರಾಯ, ಬ್ರಹ್ಮಶ್ರೀ ನಾರಾಯಣ ಗುರು, ಮಹಾತ್ಮಾ ಗಾಂಧೀಜಿ, ಡಾ.ಅಂಬೇಡ್ಕರ್, ಸ್ವಾತಂತ್ರ್ಯ ಹೋರಾಟಗಾರ ಅಮ್ಮೆಂಬಳ ಬಾಳಪ್ಪ, ಮಾಜಿ ಶಾಸಕ ಬಿ.ವಿ.ಕಕ್ಕಿಲ್ಲಾಯ ಮತ್ತಿತರ ಹೆಸರನ್ನು ಇಡುವಂತೆ ಬೇಡಿಗೆಯಿಟ್ಟು ಗಮನ ಸೆಳೆದಿರುವುದನ್ನು ಇಲ್ಲಿ ಸ್ಮರಿಸಬಹುದು


