ಸುದ್ದಿ9 ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ, ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಪರಿಕಲ್ಪನೆಯಲ್ಲಿ ಮೂಡಿಬಂದ 21ನೇ ಆಳ್ವಾಸ್ ವಿರಾಸತ್-2015 ಭಾನುವಾರ ರಾತ್ರಿ ಸಂಪನ್ನಗೊಂಡಿತು.
1 ಲಕ್ಷಕ್ಕೂ ಅಧಿಕ ಜನರು ಆಳ್ವಾಸ್ ವಿರಾಸತ್‍ನಲ್ಲಿ ಪಾಲ್ಗೊಂಡು ಸಾಂಸ್ಕ್ರತಿಕ ವೈಭವವನ್ನು ವೀಕ್ಷಿಸಿದರು. ಬೃಹತ್ ವೇದಿಕೆಯ ಮುಂದೆ ಹಾಕಲಾದ 20 ಸಾವಿರ ಆಸನಗಳು ಪ್ರತಿದಿನವೂ ತುಂಬಿದ್ದು, ಎಲ್ಲವು ಪ್ರೇಕ್ಷಕರು ನಿಂತೇ ಕಾರ್ಯಕ್ರಮ ನೋಡುವಂತಾಗಿತ್ತು. ಮೂಡುಬಿದರೆಯ ಎತ್ತರದ ಮೈದಾನ ಎನ್ನುವ ಹೆಗ್ಗಳಿಕೆ ಹೊಂದಿರುವ ವಿದ್ಯಾಗಿರಿ ಪ್ಯಾಲೇಸ್ ಗ್ರೌಂಡ್‍ನ ಸುತ್ತಮುತ್ತ ಹಾಕಲಾಗಿರುವ ವಿದ್ಯುತ್ ಅಲಂಕಾರ, ಪೂಕರೆ, ಗೂಡುದೀಪಗಳ ಜೋಡನೆ ಸಾಂಸ್ಕ್ರತಿಕ ರಸಮಯ ಗಳಿಗೆಯನ್ನು ಮತ್ತಷ್ಟು ರಸವತ್ತಾಗಿ ಕಟ್ಟಿಕೊಟ್ಟಿತು.
ಮುಸ್ಸಂಜೆ 6ಗಂಟೆಯಿಂದ 11 ಗಂಟೆಯವೆರೆಗೆ ನಿರಂತರವಾಗಿ ನಡೆದ ಗಾನ-ನೃತ್ಯ ಕಾರ್ಯಕ್ರಮಗಳು ಒಂದಕ್ಕೊಂದು ಭಿನ್ನವಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗಿದೆ. ಭಾರಿ ಜನಸಂಖ್ಯೆಯ ಪ್ರೇಕ್ಷಕರ ಮುಂದೆ ಪ್ರದರ್ಶನ ನೀಡಿದ ಕಲಾವಿದರು ಪುಳಕಿತಗೊಂಡಿದ್ದು, ಕಾರ್ಯಕ್ರಮದ ನಂತರ ಅವರು ವ್ಯಕ್ತಪಡಿಸುತಿದ್ದ ಮೆಚ್ಚುಗೆಯ ಮಾತು ಇದಕ್ಕೆ ಸಾಕ್ಷಿಯಾಯಿತು.
ಪ್ರೇಕ್ಷಕರ ಸಂಖ್ಯೆ ಪ್ರತಿವರ್ಷವೂ ಹೆಚ್ಚಾಗುತ್ತಿರುವುದು ಸಂತಸ ತಂದಿದೆ. ಸಾಂಸ್ಕ್ರತಿಕ ಸಮ್ಮೇಳನವೊಂದಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆಗಳು, ಅವರ ಸಹೃದಯತೆಯನ್ನು ಸೂಚಿಸುತ್ತದೆ. ವಿರಾಸತ್‍ಗೆ ಕಲಾರಸಿಕರ ಮೆಚ್ಚುಗೆ, ಮತ್ತಷ್ಟು ಉತ್ತೇಜನ ನೀಡಿದೆ.





