ಬಂಟ್ವಾಳ, ಜ. 7: ಇಂಡೋನೇಷಿಯದಂತಹ ಮುಸ್ಲಿಂ ರಾಷ್ಟ್ರಗಳಲ್ಲಿ ರಾಮಾಯಣ ಗ್ರಂಥಕ್ಕೆ ಪ್ರಾಧಾನ್ಯತೆ ದೊರೆತಿದೆ. ಭಗವದ್ಗೀತೆಯಂತಹ ಪವಿತ್ರ ಗ್ರಂಥಗಳ ಬಗ್ಗೆ ಭಾರತದಲ್ಲಿ ಅನಗತ್ಯ ಚರ್ಚೆ ನಡೆಯುತ್ತಿರುವುದು ಇಲ್ಲಿನ ರಾಜಕೀಯ ದುಸ್ಥಿತಿಯ ಧ್ಯೋತಕವಾಗಿದೆ ಎಂದು ರಾ.ಸ್ವ. ಸಂಘದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ಜ. 7ರಂದು ನರಿಕೊಂಬು ನಾಟಿ ಬೀದಿ ಶ್ರೀ ಕೋದಂಡರಾಮಚಂದ್ರ ಹನುಮಂತ ಗರುಡ ದೇವಸ್ಥಾನದಲ್ಲಿ ಶ್ರೀ ಹನುಮಂತ ಗುಡಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು.


ಪ್ರತಿಯೊಂದು ಮನೆಯಲ್ಲಿ ಭಗವದ್ಗೀತೆ ಸಹಿತ ರಾಮಾಯಣ ಮತ್ತು ಮಹಾಭಾರತ ಗ್ರಂಥವನ್ನು ಮಕ್ಕಳಿಗೆ ಪರಿಚರಿಯಿಸುವ ಅಗತ್ಯವಿದೆ. ಅದರ ಮೂಲಕ ಸಂಸ್ಕಾರಯುತ ಸಮಾಜ ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು.
ಕಟೀಲು ಕ್ಷೇತ್ರದ ಪ್ರ.ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಶ್ರೀ ಕೋದಂಡರಾಮಚಂದ್ರ ಗರ್ಭ ಗುಡಿಗೆ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿ ಶ್ರೀ ರಾಮನಿಗೆ ಹನುಮಂತ ಸಹಿತ ವಾನರ ಸೇನೆ ತೋರಿದ ಭಕ್ತಿ ಭೀತಿ ಪ್ರೀತಿ ಇಲ್ಲಿನ ಭಕ್ತರಲ್ಲಿ ಕಂಡು ಬರುತ್ತಿದೆ. ಇಲ್ಲಿಗೆ ದೇವರ ಸಂಪೂರ್ಣ ಅನುಗ್ರಹವಿದೆ ಎಂದರು.
ಹಿರಿಯ ಸಾಹಿತಿ ಏರ್ಯ ಲಕ್ಷ್ಮಿನಾರಾಯಣ ಆಳ್ವ ಶ್ರೀ ಗರುಡ ಗರ್ಭಗುಡಿಗೆ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿ ಭಾರತೀಯ ಸಂಸ್ಕೃತಿಗೆ ರಾಮನಾಮ ಪ್ರತಿಬಿಂಬವಾಗಿದೆ ಎಂದರು.
ಉದ್ಯಮಿಗಳಾದ ಬಿ. ರಘು ಸೋಮಯಾಜಿ, ಬಿ.ರಘು ಸಪಲ್ಯ, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಯನ್. ಪ್ರಕಾಶ ಕಾರಂತ, ಕೇಲ್ದೋಡಿ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ ಅಂಚನ್ ಶುಭ ಹಾರೈಸಿದರು.
ಪುರಸಭೆ ಮಾಜಿ ಸದಸ್ಯ ಪಾಂಡುರಂಗ ಪ್ರಭು, ಇಂಜಿನಿಯರ್ ಮರ್ದೋಳಿ ಶಂಕರನಾರಾಯಣ ರಾವ್, ಜೀರ್ಣೋದ್ಧಾರ ಸಮಿತಿ ಗೌ. ಅಧ್ಯಕ್ಷ ಡಾ| ಪ್ರದೀಪ್ ಕುಮಾರ್ ಶೆಟ್ಟಿ, , ವೇ.ಮೂ| ಪೊಳಲಿ ಸುಬ್ರಹ್ಮಣ್ಯ ತಂತ್ರಿ, ಪ್ರ.ಅರ್ಚಕ ವಿಷ್ಣುಮೂರ್ತಿ ಮಯ್ಯ ಇತರರು ಉಪಸ್ಥಿತರಿದ್ದರು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯನ್. ಪುರುಷೋತ್ತಮ ಬಂಗೇರ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೇಶವ ಶಾಂತಿ ಪ್ರಸ್ತಾವನೆ ನೀಡಿದರು. ಎಪಿಎಂಸಿ ಮಾಜಿ ಸದಸ್ಯ ಕೃಷ್ಣಪ್ಪ ನಾಯ್ಕ ಎಂ. ವಂದಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರ್ವಹಿಸಿದರು.
