ಜಮ್ಮು: ಭಾರತ ಮತ್ತು ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೈನಿಕರು ಪದೇ ಪದೆ ಕದನ ವಿರಾಮ ಉಲ್ಲಂಘಿಸಿ ಭಾರತದತ್ತ ಗುಂಡಿನ ದಾಳಿ ನಡೆಸಿದ್ದು, ನಿನ್ನೆ ಪಾಕ್ ಸೈನಿಕರು ನಡೆಸಿದ ಗುಂಡಿನ ದಾಳಿಗೆ ಐವರು ನಾಗರಿಕರು ಬಲಿಯಾಗಿದ್ದಾರೆ.
ಜಮ್ಮುವಿನ ಆರ್ನಿಯಾ ಸೆಕ್ಟರ್ ಬಳಿ ಭಾರತೀಯ ಸೇನಾ ಶಿಬಿರಗಳನ್ನು ಗುರಿಯಾಗಿರಿಸಿಕೊಂಡು ಪಾಕ್ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಒಂದು ಮಗು ಸೇರಿದಂತೆ ಐವರು ನಾಗರಿಕರು ಮೃತಪಟ್ಟಿದ್ದು, 25ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಡಿಗೆ ಹೊಂದಿಕೊಂಡಂತೆ ಇರುವ ಆರ್ನಿಯಾ ಬಳಿ ಕಳೆದ ರಾತ್ರಿ 1.30ರ ಸುಮಾರಿನಲ್ಲಿ ಪಾಕ್ ಸೈನಿಕರು ಭಾರೀ ಶೆಲ್ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಹದಿಮೂರು ವರ್ಷದ ಬಾಲಕಿ, ಇಬ್ಬರು ಮಹಿಳೆಯರು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಇಳಿದಂತೆ ದಾಳಿಯಲ್ಲಿ ಗಾಯಗೊಂಡವರ ಪೈಕಿ ಕೆಲವರ ಪರಿಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಜಮ್ಮುವಿನ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಡಿಯಲ್ಲಿ ಭಾರತೀಯ ಸೇನೆ ಹಾಗೂ ಪಾಕ್ ಸೈನಿಕರ ನಡುವೆ ನಿರಂತರವಾಗಿ ಗುಂಡಿನ ದಾಳಿ ನಡೆಯುತ್ತಿದ್ದು ಪರಿಸ್ಥಿತಿ ವಿಷಮವಾಗಿದೆ. ತಮ್ಮ ಮನೆಗಳ ಮೇಲೆ ಗುಂಡಿನ ದಾಳಿಯಾಗುತ್ತಿದ್ದು ಆ ಭಾಗದಲ್ಲಿ ನೆಲೆಸಿರುವ ಸಾರ್ವಜನಿಕರು ಭಯದಿಂದ ಬದುಕುವಂತಾಗಿದೆ.
ಗಡಿಯಲ್ಲಿ ಪಾಕ್ ಸೈನಿಕರ ಉಪಟಲ ಹೆಚ್ಚಾಗಿದೆ. ಒಂದು ವಾರದಲ್ಲಿ ಸುಮಾರು 10 ಬಾರಿ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೈನಿಕರು ಸಹ ಗುಂಡಿನ ದಾಳಿ ನಡೆಸಿದ್ದಾರೆ.

