ನವದೆಹಲಿ: ಗಡಿಯಲ್ಲಿ ಪದೇ ಪದೆ ಕದನ ವಿರಾಮ ಉಲ್ಲಂಘಿಸಿ ನಾಗರಿಕರು ಹಾಗೂ ಸೈನಿಕರ ಸಾವಿಗೆ ಕಾರಣರಾಗುತ್ತಿರುವ ಪಾಕಿಸ್ತಾನಕ್ಕೆ ಭಾರತ ಕಠಿಣ ಸಂದೇಶವನ್ನು ರವಾನಿಸಿದ್ದು, ಕದನ ವಿರಾಮ ನಿಲ್ಲಿಸದಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿರೇಖೆ ಬಳಿ ಪಾಕ್ ಸೈನಿಕರು ನಿನ್ನೆ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಐವರು ನಾಗರಿಕರು ಮೃತಪಟ್ಟಿದ್ದರು. ಅಲ್ಲದೆ 30 ಮಂದಿಗೆ ಗಾಯಗಳಾಗಿದ್ದವು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತ, ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಸೈನಿಕರು ಕೂಡ ತಕ್ಕ ಪಾಠ ಕಲಿಸುತ್ತಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಎಚ್ಚರಿಸಿದ್ದಾರೆ.

ಭಾರತದಲ್ಲಿ ಉಂಟಾಗುತ್ತಿರುವ ಬದಲಾವಣೆ ಮತ್ತು ಇಲ್ಲಿನ ಪರಿಸ್ಥಿತಿಯನ್ನು ನೆರೆಯ ರಾಷ್ಟ್ರ ಅರ್ಥ ಮಾಡಿಕೊಳ್ಳಬೇಕು. ಇನ್ನೊಂದು ಸಲ ಕದನ ವಿರಾಮ ಉಲ್ಲಂಘಿಸಿ ಮುಗ್ಧ ನಾಗರಿಕರು ಹಾಗೂ ಸೈನಿಕರ ಮೇಲೆ ಹಲ್ಲೆ ನಡೆಸಲು ಮುಂದಾದರೆ ನಮ್ಮ ಶಕ್ತಿ ಏನೆಂಬುದನ್ನು ತೋರಿಸಬೇಕಾಗುತ್ತದೆ ಎಂದು ಪಾಕ್ ವಿರುದ್ಧ ಗುಡುಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸನ್ನದ್ದರಾಗಿರುವಂತೆ ನಮ್ಮ ಸೈನಿಕರಿಗೆ ಸೂಚಿಸಲಾಗಿದೆ ಎಂದರು. ಕದನ ವಿರಾಮ ಉಲ್ಲಂಘಿಸಬಾರದೆಂದು ಉಭಯ ರಾಷ್ಟ್ರಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೂ ನೆರೆ ರಾಷ್ಟ್ರ ನಮ್ಮ ಸಹನೆಯನ್ನು ದೌರ್ಬಲ್ಯ ಎಂದು ಅರ್ಥೈಸಿಕೊಂಡಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಭಾರತ ಸಹ ಶಸ್ತ್ರಗಳ ಮೂಲಕವೇ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಮ್ಮುವಿನ ಆರ್ನಿಯಾ ಸೆಕ್ಟರ್ ಬಳಿ ಭಾರತೀಯ ಸೇನಾ ಶಿಬಿರಗಳನ್ನು ಗುರಿಯಾಗಿರಿಸಿಕೊಂಡು ಪಾಕ್ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಒಂದು ಮಗು ಸೇರಿದಂತೆ ಐವರು ನಾಗರಿಕರು ಮೃತಪಟ್ಟಿದ್ದು, 30ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ.
