ಇಸ್ಲಾಂ ಧರ್ಮದಲ್ಲಿ ಅನೇಕ ಪವಿತ್ರ ದಿನಗಳೂ ಹಬ್ಬಗಳೂ ಇದೆ. ಪ್ರತಿಯೊಂದಕ್ಕೂ ಪ್ರತ್ಯೇಕ ಹಿನ್ನೆಲೆಯೂ ಇದೆ. ಅತ್ಯಂತ ಬಹಿರಂಗವಾಗಿ ಆಚರಿಸುವ ಹಬ್ಬವಾಗಿದೆ ಈದುಲ್ ಫಿತ್ರ್ ಅಥವಾ ಪೆರ್ನಾಳ್. ತದನಂತರ ಸರಿಸುಮಾರು 70 ದಿನಗಳ ನಂತರ ಆಚರಿಸುವ ಹಬ್ಬವಾಗಿದೆ ಈದುಲ್ ಅಝ್ಹಾ.

ಸೃಷ್ಟಿಕರ್ತನಾದ ಅಲ್ಲಾಹುವಿನ ಪೂರ್ವ ನಿರ್ಧರಿತ ವಿಧಿಯಂತೆ ರಂಝಾನ್ ತಿಂಗಳಿಡೀ ಹಗಲು ಉಪವಾಸ ಹಿಡಿದು ಭಕ್ತನಿಗೆ ಸಂತೋಷಪಡೆಯಲು ಹಾಗೂ ಆಹ್ಲಾಧಿಸಲು ಅನುಮತಿಸಿದ ದಿನವಾಗಿದೆ ಈ ಹಬ್ಬ. ಆದರೆ ಎಲ್ಲವೂ ಧರ್ಮದ ಚೌಕಟ್ಟಿನಲ್ಲಿರಬೇಕೆಂಬುವುದು ಇಸ್ಲಾಮಿನ ಕಟ್ಟುನಿಟ್ಟಿನ ನಿಯಮಮವಾಗಿದೆ. ಅದನ್ನು ನಿರ್ವಹಿಸಲು ಪ್ರತಿಯೊಬ್ಬರೂ ಭಾದ್ಯಸ್ಥರಾಗಿರುತ್ತಾರೆ.
ಈ ಹಬ್ಬವು ಕೇವಲ ತಿಂದುಂಡು ಮುಗಿಸಲಿಕ್ಕೆ ಮಾತ್ರ ಸೀಮಿತವಲ್ಲ. ಆ ದಿನ ಪುರುಷರು ತಮ್ಮ ತಮ್ಮ ಊರಿನ ಮಸೀದಿಗಳಿಗೆ ಅಥವಾ ಈದ್ಗಾ ಮೈದಾನಕ್ಕೆ ಹೋಗಿ ಪ್ರತ್ಯೇಕ ಪ್ರಾರ್ಥನೆಯನ್ನು ಸಾಮೂಹಿಕವಾಗಿ ಸಲ್ಲಿಸುತ್ತಾರೆ. ಸ್ತ್ರೀಯರು ಈ ಪುಣ್ಯ ಕರ್ಮವನ್ನು ಮನೆಯಲ್ಲಿ ನೆರವೇರಿಸುತ್ತಾರೆ.
ಮಸೀದಿಯಲ್ಲಿ ಸೇರಿದವರಲ್ಲಿ ಬಡವ-ಬಲ್ಲಿದ, ಬಿಳಿಯ-ಕರಿಯ ಪಂಡಿತ ಪಾಮರವೆಂಬ ಬೇದಭಾವವಿಲ್ಲದೆ ಬುಜಕ್ಕೆ ಬುಜ ತಾಗಿಸಿ ವಿಶಾಲವಾದ ಮಸೀದಿ ಪಂಕ್ತಿಯಲ್ಲಿ ಕುಳಿತುಕೊಳ್ಳುವ ಆ ದೃಷ್ಯ ಅತ್ಯಂತ ರಮಣೀಯವಾಗಿದೆ. ಮಾನವರೆಲ್ಲರೂ ಮಾನವೀಯತೆಯಲ್ಲಿ ಸಮಾನರು. ಮೇಲು ಕೀಳಿಗೆ ಇಸ್ಲಾಮಿನಲ್ಲಿ ಅವಕಾಶವಿಲ್ಲ ಎಂಬ ಸಹೋದರತೆಯ ಸೌಹಾರ್ಧದ ಸಂಕೇತವನ್ನು ಸ್ವಯಂ ಘೋಷಿಸುತ್ತದೆ ನಿರಂತರ ಸಾಗಿದ ಆ ಪಂಕ್ತಿಗಳು.
ಪ್ರಾರ್ಥನೆ ಮುಗಿಸಿದ ನಂತರ ಮುಸ್ಲಿಂ ಭಾಂದವರು ಪರಸ್ಪರ ಆಲಿಂಗಿಸಿ ಈದ್ ಶುಭಾಶಯ ವಿನಿಮಯ ಮಾಡಿ ಒಂದಾಗಿ ಮಸೀದಿಯಿಂದ ತೆರಳಿ ನೆರೆಮನೆ ಹಾಗೂ ಸಂಬಂಧಿಕರನ್ನು ಭೇಟಿಯಾಗಿ ತಮ್ಮ ಸುಖಃ-ದುಖಃಗಳನ್ನು ಹಂಚಿಕೊಳ್ಳುತ್ತಾರೆ. ಒಟ್ಟಿನಲ್ಲಿ ರಂಝಾನ್ ಹಬ್ಬವು ಧಾರ್ಮಿಕ ವಿಧಿವಿಧಾನಗಳಿಂದ ಕೂಡಿದ ಶಾಂತಿಯ ಸೌಹಾರ್ಧದ ಸಂಕೇತವಾಗಿದೆ.
-ಆಶಿಕ್ ಕುಕ್ಕಾಜ
