ಬಂಟ್ವಾಳ: ಭಾರತೀಯ ಜನತಾ ಪಕ್ಷದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ರೈತ ಮೋರ್ಚಾ ಪದಾಧಿಕಾರಿಗಳ ಸಭೆ ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ನಡೆಯಿತು.ರೈತ ಮೋರ್ಚಾ ಅಧ್ಯಕ್ಷ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ರಾಜ್ಯ ಸರ್ಕಾರದಿಂದ ರೈತರಿಗೆ ನೀಡಲಾಗುತ್ತಿದ್ದ ಕೃಷಿ ಸಮ್ಮಾನ್ ಯೋಜನೆಯಡಿ 4 ಸಾ.ರೂ.ಹಾಗೂ ಸಮಗ್ರ ಕೃಷಿ ಅಭಿವೃದ್ಧಿಗೆ ನೀಡಲಾಗುತ್ತಿದ್ದ 35 ಸಾ.ರೂ. ಸಹಾಯಧನವನ್ನು ಈಗಿನ ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದ್ದು,ಈ ವಿಚಾರವನ್ನು ರೈತರಿಗೆ ತಿಳಿಹೇಳುವ ಕೆಲಸವನ್ನು ರೈತ ಮೋರ್ಚಾದ ಪದಾಧಿಕಾರಿಗಳು ಮಾಡಬೇಕು ಎಂದು ಅವರು ತಿಳಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ಜಾರಿಗೊಳಿಸಿರುವ ಕೃಷಿ ಸಮ್ಮಾನ್, ಫಸಲ್ ಭೀಮಾ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸುವ ಮೂಲಕ ಯೋಜನೆಗಳ ಮಾಹಿತಿ ಹಾಗೂ ಪ್ರಯೋಜನಗಳನ್ನು ರೈತರಿಗೆ ತಲುಪಿಸಬೇಕು ಎಂದು ಹೇಳಿದರು.
ರೈತ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ, ಬಂಟ್ವಾಳ ಮಂಡಲದ ಪ್ರಭಾರಿ ಸತೀಶ್ ಬೋಳಿಯಾರ್ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ಸಿಗುವಂತ ವಿವಿಧ ಸೌಲಭ್ಯಗಳು ಹಾಗೂ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ರೈತ ಮೋರ್ಚಾ ಕಾರ್ಯನಿರ್ವಹಿಸಬೇಕು ಎಂದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಮಂಡಲ ರೈತ ಮೋರ್ಚಾ ಪ್ರಭಾರಿ ವಸಂತ ಅಣ್ಣಳಿಕೆ ಹಾಗೂ ರೈತ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ನೂತನ ರೈತ ಮೋರ್ಚಾ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸದಾನಂದ ನಾವೂರು ಸ್ವಾಗತಿಸಿ, ವಂದಿಸಿದರು.
