ಬಂಟ್ವಾಳ: ದೇಶದಾದ್ಯಂತ ಆಚರಣೆಯಲ್ಲಿರುವ ಪಂಚ ಪರಿವರ್ತನೆಗಳಿಗೆ ಸಹಕಾರ ಸಂಘವು ಆದ್ಯತೆ ನೀಡುತ್ತಿದ್ದು, ಪರಿಸರ ಸಂರಕ್ಷಣೆಯು ಇದರ ಒಂದು ಭಾಗವಾಗಿರುವ ಹಿನ್ನಲೆಯಲ್ಲಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೃಷ್ಣ ರೈ ರೈತ ಸಭಾಂಗಣದಲ್ಲಿ ಶನಿವಾರ ನಡೆದ 2025-26 ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಪ್ರತಿಯೋರ್ವ ಸದಸ್ಯ ಸೇರಿದಂತೆ ಸುಮಾರು ಮೂರು ಸಾವಿರ ಮಂದಿಗಳಿಗೆ ಹಲಸಿನ ಗಿಡಗಳನ್ನು ವಿತರಿಸಲಾಯಿತು.

ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನ ದಡಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತಮ್ಮ ಕಾರ್ಯ ವ್ಯಾಪ್ತಿಯ ಸಹಕಾರಿಗಳು ಮತ್ತು ಗ್ರಾಹಕರಿಗೆ ದೇಶಿಯ ಉತ್ಪನ್ನಗಳ ಉತ್ಪಾದನೆ ಮತ್ತು ಬಳಕೆ ಮಾಡಲು ಉತ್ತೇಜನ ನೀಡಬೇಕು ಎಂದರು.
ಮುಂದಿನ ದಿನಗಳಲ್ಲಿ ಸಂಘದ ಕೇಂದ್ರ ಕಚೇರಿಯ ಆವರಣದಲ್ಲಿ ಸಾಮಾನ್ಯ ಸೇವಾ ಕೇಂದ್ರ ತೆರೆಯುವ ಮೂಲಕ ಜನಸಾಮಾನ್ಯರಿಗೆ ಸಿಗುವ ಎಲ್ಲಾ ಸೇವೆಗಳನ್ನು ಒದಗಿಸಲಾಗುವುದು ಎಂದೂ ತಿಳಿಸಿದರು.
ಸಂಘವು ಪ್ರಸ್ತುತ ಸಾಲಿನಲ್ಲಿ 720.47ಕೋಟಿ ವ್ಯವಹಾರದೊಂದಿಗೆ 2.19 ಕೋಟಿ ಲಾಭಗಳಿಸಿದೆ ಎಂದು ಹೇಳಿದ ಅವರು ಈ ಸಂದರ್ಭ ಸಂಘದ ಸದಸ್ಯರಿಗೆ ಶೇ 12 ಡಿವಿಡೆಂಟನ್ನು ಪ್ರಕಟಿಸಿದರು.
4.23 ಲ.ಪ್ರೀಮಿಯಂ:
2025-26 ನೇ ಸಾಲಿನಲ್ಲಿ ಯಶಸ್ವಿನಿ ಆರೋಗ್ಯ ರಕ್ಷಣೆ ಯೋಜನೆಯನ್ವಯ 612 ಕುಟುಂಬಗಳ 2307 ಸದಸ್ಯರು ನೋಂದಣಿ ಮಾಡಿದ್ದು,ಒಟ್ಟು 4.23 ಲಕ್ಷ ಪ್ರೀಮಿಯಂ ಮೊತ್ತವನ್ನು ಸರಕಾರಕ್ಕೆ ಪಾವತಿಸಲಾಗಿದೆ. ಲೆಕ್ಕ ಪರಿಶೋಧನೆಯಲ್ಲಿ ಸತತವಾಗಿ ‘ಎ’ ಗ್ರೇಡ್ ನ್ನು ಕಾಯ್ದುಕೊಂಡಿದ್ದು,,ಶೇ 98 ಸಾಲ ವಸೂಲಾತಿ ಪ್ರಗತಿ ಸಾಧಿಸಲಾಗಿದೆ. ಶೇ. 100 ಸಾಲ ವಸೂಲಾತಿ ಸಾಧಿಸುವಲ್ಲಿ ಸದಸ್ಯರು ಸಹಕಾರ ನೀಡಬೇಕೆಂದರು.
ಸಂಘವು ನಿರಂತರವಾಗಿ ಪ್ರಗತಿ ಸಾಧಿಸಿರುವ ಹಿನ್ನಲೆಯಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಂದ ಸತತವಾಗಿ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರವಾಗಿದೆ.ಪ್ರಧಾನ ಕಛೇರಿ ಸೇರಿದಂತೆ ರಾಯಿ ,ಆರಂಬೋಡಿ,ಮಾವಿನ ಕಟ್ಟೆ ,ಅರಳ ಶಾಖೆಗಳು ಧನಾತ್ಮಕವಾಗಿ ಪ್ರಗತಿಯತ್ತ ಮುನ್ನಡೆಯುತ್ತಿದೆ ಎಂದರು.
ಸಭೆ ಆರಂಭಕ್ಕು ಮುನ್ನ ನಿಧನರಾದ ಸಂಘದ 38 ಸದಸ್ಯರಿಗೆ ಮೌನ ಪ್ರಾರ್ಥನೆ ಮೂಲಕ ಶೃದ್ದಾಂಜಲಿ ಅರ್ಪಿಸಲಾಯಿತು.
ನಿರ್ದೇಶಕರಾದ ಸತೀಶ್ ಪೂಜಾರಿ, ರಶ್ಮಿತ್ ಶೆಟ್ಟಿ ಚಂದ್ರಶೇಖರ ಶೆಟ್ಟಿ , ವೀರಪ್ಪ ಪರವ, ಜಾರಪ್ಪ ನಾಯ್ಕ, ಮಂದರಾತಿ ಎಸ್ ಶೆಟ್ಟಿ, ಪುಷ್ಪಲತಾ ಎಸ್ ಆರ್, ವೃತ್ತಿ ಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು,ನವೀನ್ ಹೆಗ್ಡೆ ವೇದಿಕೆಯಲ್ಲಿದ್ದರು.
ಸಂಘದ ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ವಾರ್ಷಿಕ ವರದಿ,ಲೆಕ್ಕಪತ್ರವನ್ನು ಮಂಡಿಸಿದರು.
, ಸಹಾಯಕ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ದಿನೇಶ್ ಪೂಜಾರಿ ವಂದಿಸಿದರು .
ಆರೋಗ್ಯ ತಪಾಸಣೆ:
ಪ್ರಧಾನ ಮಂತ್ರಿ ಜನ ಔಷಧಿ ಸಿದ್ದಕಟ್ಟೆ ಘಟಕದ ವತಿಯಿಂದ ಸಂಘದ ವಠಾರದಲ್ಲಿ ಸದಸ್ಯರ ಉಚಿತ ಅರೋಗ್ಯ ತಪಾಷಣೆ ಯನ್ನು ನಡೆಸಲಾಯಿತು.ಈ ವ್ಯವಸ್ಥೆ ಸದಸ್ಯರಿಂದ ಪ್ರಶಂಸೆಗೂ ಪಾತ್ರವಾಯಿತು.
