ಮನೆ ಖಾಲಿ ಮಾಡಲು ಉಪತಹಶೀಲ್ದಾರ್ ಸೂಚನೆ
ಕೈಕಂಬ : ಕಳೆದ ನಾಲ್ಕು ದಿನದಿಂದ ಸುರಿಯುತ್ತಿರುವ ಧಾರಾಕಾರ ಗಾಳಿ ಮಳೆಗೆ ವಾಮಂಜೂರು ಮನಪಾ ತಿರುವೈಲು ವಾರ್ಡ್ನ ಕೆಲರೈಕೋಡಿ ೨ನೇ ಬ್ಲಾಕ್‌ನ ಜಯಂತಿ ದಾಮೋದರ ಪೂಜಾರಿ ಎಂಬವರ ಮನೆಯ ಎದುರಿನಲ್ಲಿ ಬೃಹತ್ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ಮನೆಗೆ ತೀವ್ರ ಹಾನಿಯುಂಟಾಗಿ, ಅಪಾಯಕ್ಕೆ ಸಿಲುಕಿದೆ.

ಜಯಂತಿ ಅವರ ಮನೆಯಂಗಳಕ್ಕೆ ಗುಡ್ಡದಿಂದ ಲೋಡ್‌ಗಟ್ಟಳೆ ಮಣ್ಣು ಜರಿದಿದ್ದು, ಮನೆ ಖಾಲಿ ಮಾಡಲು ತಯಾರಿ ನಡೆಸಿದ್ದಾರೆ. ಗುಡ್ಡದ ಮೇಲ್ಭಾಗದ ಅಂಚಿನಲ್ಲಿರುವ ಶಂಭು ಪೂಜಾರಿ ಮತ್ತು ಬಾಬು ಶಕೀಲಾ ಎಂಬವರ ಮನೆಗೂ ಅಪಾಯ ಎದುರಾಗಿದ್ದು, ಅವೆರಡು ಮನೆಗಳು ಯಾವುದೇ ಕ್ಷಣದಲ್ಲಿ ಜಯಂತಿಯವರ ಮನೆ ಮೇಲೆ ಬಿದ್ದು ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಸದ್ಯ ಗುಡ್ಡ ಜರಿದ ಪ್ರದೇಶದಲ್ಲಿ ಉದ್ದಗಲಕ್ಕೂ ಟಾರ್ಪಲ್ ಹಾಸಲಾಗಿದ್ದು, ಸತತ ಮಳೆಗೆ ಗುಡ್ಡದ ನೀರು ಪ್ರವಾಹದಂತೆ ಮನೆಯತ್ತ ಹರಿಯುತ್ತಿದೆ.

“ಇಲ್ಲಿ ಕಳೆದ ವರ್ಷವೂ ಗುಡ್ಡ ಜರಿದಿದ್ದು, ಮಣ್ಣಿನೊಂದಿಗೆ ಬಂಡೆಯೊAದು ಬಿದ್ದು ಮನೆಯ ಸಿಟೌಟ್ ಪುಡಿಯಾಗಿತ್ತು. ಮನೆಯ ಎದುರು ಸ್ವಂತ ಕರ್ಚಿಂದ ನಿರ್ಮಿಸಿದ್ದ ತಡೆಗೋಡೆ ಈ ಬಾರಿ ಗುಡ್ಡ ಕುಸಿತಕ್ಕೆ ನೆಲಸಮವಾಗಿದೆ. ಗುಡ್ಡದ ಮೇಲಿನ ಖಾಸಗಿ ಜಾಗದ ಮಾಲಕ ಜೋಕಿಂ ಡಿ’ಸೋಜ ಎಂಬವರು ಸೂಕ್ತ ತಡೆಗೋಡೆ ನಿರ್ಮಿಸದೆ ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಿದೆ. ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಸದ್ಯ ಮನೆ ಖಾಲಿ ಮಾಡುವುದಾದರೂ ಎಲ್ಲಿಗೆ ಎಂಬ ಪ್ರಶ್ನೆ ಎದುರಾಗಿದೆ. ರಾತ್ರಿ ನಿದ್ದೆ ಇಲ್ಲ. ಸ್ಥಳೀಯ ಕಾರ್ಪೊರೇಟರ್ ಮತ್ತು ಶಾಸಕರಿಂದ ಭರವಸೆ ಮಾತ್ರ ಸಿಕ್ಕಿದೆ. ಕೆಲಸ ಆಗಿಲ್ಲ” ಎಂದು ಜಯಂತಿ ಭೀತಿ ವ್ಯಕ್ತಪಡಿಸಿದ್ದಾರೆ.

ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳ, ವಾಮಂಜೂರು ತಿರುವೈಲು ವಲಯ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಪಕ್ಷದ ಹಿರಿಯ ನಾಯಕರಾದ ಮಂಜುನಾಥ ಭಂಡಾರಿ, ಇನಾಯತ್ ಅಲಿ ಮತ್ತಿತರಿಗೆ ಕರೆ ಮಾಡಿ ಸಂತ್ರಸ್ತರಿಗೆ ಪರಿಹಾರ ಹಾಗೂ ಮನೆ ಸ್ಥಳಾಂತರಕ್ಕೆ ನೆರವು ನೀಡಬೇಕೆಂದು ಮನವಿ ಮಾಡಿದರು. “ಅಪಾಯದಲ್ಲಿರುವ ಎರಡೂ ಮನೆಯವರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಬೇಕು. ಇನ್ನಾದರೂ ಪಕ್ಷಬೇಧ ಮರೆತು ಸ್ಥಳೀಯ ಶಾಸಕರು ಮತ್ತು ಶಾಸಕರು ಇವರ ಬೇಡಿಕೆಗೆ ಸ್ಪಂದಿಸಬೇಕು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಪರಿಹಾರಕ್ಕಾಗಿ ಪ್ರಯತ್ನಿಸಲಾಗುವುದು” ಎಂದು ಸುರೇಂದ್ರ ಕಂಬಳಿ ಭರವಸೆ ನೀಡಿದರು. ಭೇಟಿ ನೀಡಿದ ಗುರುಪುರ ನಾಡಕಚೇರಿ ಉಪತಹಶೀಲ್ದಾರ್ ಶಿವಪ್ರಸಾದ್ ಬಿಜೆಪಿ ಉತ್ತರ ಮಂಡಲ ಉಪಾಧ್ಯಕ್ಷ ರಾಜೇಶ್ ಕೊಟ್ಟಾರಿ ಮತ್ತಿತರರು ಭೇಟಿ ನೀಡಿದರು.
