ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು -ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿ ನಡುವಿನ ಬಂಟ್ವಾಳ ಬೈಪಾಸ್ ನಿತ್ಯಾನಂದ ನಗರದಲ್ಲಿ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ ಇದರ ಸುವರ್ಣ ಮಹೋತ್ಸವ ಪ್ರಯುಕ್ತ ರೂ ೨ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಮಂದಿರ ಲೋಕಾರ್ಪಣೆ ಸಹಿತ ಗುರುದ್ವಯರ ಪಂಚಲೋಹದ ವಿಗ್ರಹ ಪ್ರತಿಷ್ಠಾ ಮಹೋತ್ಸವ ಮತ್ತು ಉಚಿತ ಸಾಮೂಹಿಕ ವಿವಾಹ ಸಮಾರಂಭ ಇದೇ ೨೨ರಿಂದ ೨೯ರ ತನಕ ನಡೆಯಲಿದೆ ಎಂದು ಮಾಜಿ ಪುರಸಭಾಧ್ಯಕ್ಷ, ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಬಿ.ದಿನೇಶ್ ಭಂಡಾರಿ ಹೇಳಿದ್ದಾರೆ.

ಇಲ್ಲಿನ ನೂತನ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಕಳೆದ ೧೯೭೨ರಲ್ಲಿ ದಿವಂಗತ ಧರ್ಣಪ್ಪ ಮಾಸ್ಟರ್ ಎಂಬವರ ೮ ಸೆಂಟ್ಸ್ ಮನೆ ನಿವೇಶನದಲ್ಲಿ ಆರಂಭಗೊಂಡ ಮಂದಿರವು ಬಳಿಕ ದಿವಂಗತ ಮೋನಪ್ಪ ಕಿರೋಡಿಯನ್ ನೇತೃತ್ವದಲ್ಲಿ ಭಜನೆ ಮುಂದುವರಿದಿತ್ತು. ಇದೀಗ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಮತ್ತು ಸದ್ಗುರು ಗೋವಿಂದ ಸ್ವಾಮೀಜಿ ಇವರ ಪಂಚಲೋಹದ ವಿಗ್ರಹ ಪ್ರತಿಷ್ಠೆಗೊಳಿಸಲು ಮುಂಬೈ ಗಣೇಶಪುರಿಯಿಂದ ತರಲಾಗಿದೆ ಎಂದರು.

ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮಾತನಾಡಿ, ಈ ಮಂದಿರದಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃ ತಿಕ, ಸಾಮಾಜಿಕ ಚಟುವಟಿಕೆ ಸಹಿತ ಪ್ರತೀ ವರ್ಷ ಉಚಿತ ಸಾಮೂಹಿಕ ವಿವಾಹ, ಮಕ್ಕಳಿಗೆ ಬಾಲಭೋಜನ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

ಇದೇ ೨೨ರಂದು ಮಧ್ಯಾಹ್ನ ೨.೩೦ ಗಂಟೆಗೆ ಬಿ.ಸಿ.ರೋಡು ಶ್ರೀ ರಕ್ತೇಶ್ವರಿ ದೇವಸ್ಥಾನ ಬಳಿ ಹೊರಡಲಿರುವ ಗುರುದ್ವಯರ ಪಂಚಲೋಹದ ವಿಗ್ರಹ ಸಹಿತ ಆಕರ್ಷಕ ಹೊರೆಕಾಣಿಕೆ ಮೆರವಣಿಗೆಗೆ ಮಾಣಿಲ ಮೋಹನದಾಸ ಸ್ವಾಮೀಜಿ ಮತ್ತು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಚಾಲನೆ ನೀಡುವರು.
ಇದೇ ೨೫ರಂದು ಸಂಜೆ ೬ ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ೨೬ರಂದು ಬೆಳಿಗ್ಗೆ ಗಂಟೆ ೯.೫೦ರಿಂದ ಗುರುದ್ವಯರ ವಿಗ್ರಹ ಪ್ರತಿಷ್ಠೆ ಮತ್ತು ಧಾರ್ಮಿಕ ಸಭೆ ನಡೆಯಲಿದೆ. ೨೭ರಂದು ಬೆಳಿಗ್ಗೆ ಗಂಟೆ ೧೦.೪೬ಕ್ಕೆ ಉಚಿತ ಸಾಮೂಹಿಕ ವಿವಾಹ ಮತ್ತು ಧಾರ್ಮಿಕ ಸಭೆ ಇದೆ.
ಸತ್ಯನಾರಾಯಣ ಭಟ್ ಇಜ್ಜ ಮತ್ತು ತಂತ್ರಿ ನಾರಾಯಣ ಭಟ್ ಕೊರೆಕ್ಕಾನ ಮಾರ್ಗದರ್ಶನದಲ್ಲಿ ವಿವಿಧ ವೈದಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಧಾರ್ಮಿಕ ಸಭೆಯಲ್ಲಿ ಬೆಳಗಾವಿ ಬೇವಿನಕೊಪ್ಪ ಆನಂದಾಶ್ರಮದ ವಿಜಯಾನಂದ ಸ್ವಾಮೀಜಿ, ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಅವಧೂತ ವಿನಯ ಗುರೂಜಿ, ಬೆಳಗಾವಿ ಸೋಗಲ ಸ್ವರ್ಗಾಶ್ರಮ ಮೋಹನ ಸ್ವಾಮೀಜಿ, ಕಾಂಞಗಾಡ್ ವಿದ್ಯಾನಂದ ಭಾರತಿ ಸ್ವಾಮೀಜಿ, ಮರಕಡ ಮಾತಾಜಿ ಗೀತಾನಂದಿನಿ, ಮುಂಬೈ ಗಣೇಶಪುರಿ ಕ್ಷೇತ್ರದ ಪ್ರಧಾನ ಅರ್ಚಕ ನಂದು ಮಹಾರಾಜ್, ಆರ್ ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಸಹಿತ ವಿವಿಧ ಮಂತ್ರಿವರ್ಯರು ಮತ್ತಿತರ ಗಣ್ಯರು ಭಾಗವಹಿಸುವರು. ಪ್ರತೀ ದಿನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ವಿವರಿಸಿದರು.
ಇಲ್ಲಿನ ಮಂದಿರದ ವತಿಯಿಂದ ರೂ ೧ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿಮಾಣಗೊಳ್ಳುತ್ತಿದ್ದು, ಸರ್ಕಾರ ಅನುದಾನ ನೀಡಬೇಕು ಎಂದು ಅವರು ಆಗ್ರಹಿಸಿದರು.
ವಿಶೇಷತೆ:
ಭಗವಾನ್ ನಿತ್ಯಾನಂದ ಸ್ವಾಮಿ ಮತ್ತು ಸದ್ಗುರು ಗೋವಿಂದ ಸ್ವಾಮೀಜಿ (ಗುರು-ಶಿಷ್ಯರು) ವಿಗ್ರಹ ಒಂದೇ ಗರ್ಭಗುಡಿಯಲ್ಲಿ ಪ್ರತಿಷ್ಠೆ.
ಭಕ್ತರಿಗೆ ಸ್ವತಃ ಪೂಜೆಗೆ ಅವಕಾಶ, ನಾಲ್ಕು ದಿಕ್ಕಿನಲ್ಲಿ ಬಾಗಿಲು ಹೊಂದಿರುವ ಅಪರೂಪದ ‘ಶ್ರೀಚಕ್ರ’ ಶೈಲಿ ಮಂದಿರ ವಿನ್ಯಾಸ.
ಭಗವಾನ್ ನಿತ್ಯಾನಂದ ಸ್ವಾಮೀಜಿ ಬಂಟ್ವಾಳಕ್ಕೆ ಭೇಟಿ ನೀಡಿ ೧೦೦ ವರ್ಷ ಪೂರೈಕೆ.
-ಬಿ.ನಾಗರಾಜ ಶೆಟ್ಟಿ
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಹರೀಶ್ ಶೆಟ್ಟಿ, ಗೌರವಾಧ್ಯಕ್ಷ ಸುರೇಶ್ ಕುಲಾಲ್, ಕಾರ್ಯದರ್ಶಿ ಹರೀಶ್ ಎಂ., ಮತ್ತು ಹರೀಶ್, ಉಪಾಧ್ಯಕ್ಷೆ ದೇವಕಿ, ಉದ್ಯಮಿ ನಾಗೇಶ್ ಕುಲಾಲ್, ಸೋಮಪ್ಪ ಪೂಜಾರಿ, ರಾಮದಾಸ್ ಬಂಟ್ವಾಳ ಇದ್ದರು.
