ಕೈಕಂಬ : ಗ್ರಾಮೀಣ ಜನರು ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಕೆಲವು ರಜೆ ಮಾಡಿ ನಗರ, ಪಟ್ಟಣಗಳಲ್ಲಿರುವ ಇಲಾಖೆಗಳಿಗೆ ಅಲೆದಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜನಸ್ಪಂದನಾ ಕಾರ್ಯಕ್ರಮ ಆಯೋಜಿಸಿ, ಒಂದೇ ಸೂರಿನಡಿ ಸರ್ಕಾರಿ ಸೇವಾ ಸೌಲಭ್ಯಗಳು ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.

ಗುರುಪುರ ಕೈಕಂಬದ ಖಾಸಗಿ ಸಭಾಗೃಹದಲ್ಲಿ ಗುರುಪುರ, ಗಂಜಿಮಠ ಮತ್ತು ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ಆಯೋಜಿಸಲಾದ ಬೃಹತ್ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ ಒಟ್ಟು ೪ ನಗರ ಮತ್ತು ೩ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಈಗಾಗಲೇ ೪ ಜನಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ಹಕ್ಕುಪತ್ರ, ಅಂಚೆ, ಕಂದಾಯ, ಕೃಷಿ, ಬ್ಯಾಂಕ್, ಅರಣ್ಯ, ಶಿಕ್ಷಣ, ಕಾರ್ಮಿಕ, ಪಂಚಾಯತ್ ಆಡಳಿತಗಳು, ಶಾಸಕರ ಆಪ್ತರ ಕಚೇರಿ, ಮೆಸ್ಕಾಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯಂತಹ ಒಟ್ಟು ೩೫ ಇಲಾಖೆಗಳು ಸಾರ್ವಜನಿಕರ ಸೇವೆಯಲ್ಲಿ ನಿರತವಾಗಿವೆ ಎಂದರು.

ಗುರುಪುರ ಹೋಬಳಿಯ ಉಪತಹಶೀಲ್ದಾರ್ ಶಿವಪ್ರಸಾದ್ ಮಾತನಾಡಿ ಪ್ರಸ್ತಾವಿಕ ಮಾತನಾಡಿದರು. ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ, ಗಂಜಿಮಠ ಪಂಚಾಯತ್ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಕಂದಾವರ ಪಂಚಾಯತ್ ಅಧ್ಯಕ್ಷ ಉಮೇಶ್ ಮೂಲ್ಯ, ಬಿಜೆಪಿ ಮುಖಂಡ ಸಂದೀಪ್ ಪಚ್ಚನಾಡಿ, ಗುರುಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಹನ್ ಅತಿಕಾರಿ ಉಪಸ್ಥಿತರಿದ್ದರು. ಮಧುರಾಜ್ ಗುರುಪುರ ಸ್ವಾಗತಿಸಿ ವಂದಿಸಿದರು.

ಜನಸ್ಪAದನಾ ಕಾರ್ಯಕ್ರಮದಲ್ಲಿ ಮೂರೂ ಪಂಚಾಯತ್ ವ್ಯಾಪ್ತಿಯ ನೂರಾರು ಫಲಾನುಭವಿಗಳಿಗೆ ಕಟ್ಟಡ ಕಾರ್ಮಿಕರ ಕಿಟ್, ಅಂಚೆ ಪಾಸ್‌ಪುಸ್ತಕ, ಮಳೆಹಾನಿ(ಪ್ರಕೃತಿ ವಿಕೋಪ) ಪರಿಹಾರ ಪ್ರಮಾಣಪತ್ರ, ಹಕ್ಕುಪತ್ರ ವಿತರಿಸಲಾಯಿತು. ಕಾರ್ಯಕ್ರಮದಿಂದ ಸಾಕಷ್ಟು ಸಂಖ್ಯೆಯ ಮಂದಿ ಪ್ರಯೋಜನ ಪಡೆದುಕೊಂಡರು.

