ಕೈಕಂಬ : ಮಂಗಳೂರು ಬಲ್ಮಠದ ಪಬ್ ಮೇಲೆ ಹಿಂದೂ ಸಂಘಟನೆಗಳು ಯಾವುದೇ ರೀತಿಯ ದಾಳಿ ನಡೆಸಿಲ್ಲ. ವೀಡಿಯೋಗಳಲ್ಲಿ ಆ ರೀತಿ ಬಿಂಬಿಸಲಾಗುತ್ತಿದ್ದರೂ, ಆ ಬಗ್ಗೆ ಪೊಲೀಸ್ ಇಲಾಖೆ ಕೂಲಂಕಷ ತನಿಖೆ ನಡೆಸುತ್ತಿದೆ. ಪಬ್‌ನಲ್ಲಿ ಅಪ್ರಾಪ್ತ ಯುವಕ-ಯುವತಿಯರಿಗೆ, ಮಕ್ಕಳಿಗೆ ಮದ್ಯ, ಸಿಗರೇಟ್ ಮತ್ತಿತರ ಮಾದಕ ದ್ರವ್ಯ ನೀಡಲಾಗುತ್ತಿದೆಯೇ ಎಂದು ಪಬ್ ಮ್ಯಾನೇಜರ್ ಮತ್ತು ಬೌನ್ಸರಗಳಲ್ಲಿ ಪ್ರಶ್ನಿಸಲಾಗಿತ್ತು ಎಂಬ ಮಾಹಿತಿ ಇದೆ. ಅಲ್ಲಿ ಬೇರೇನೂ ನಡೆದಿಲ್ಲ ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

೨೦೦೯ರಲ್ಲಿ ಅದೇ ಪಬ್ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಮತ್ತು ಸರ್ಕಾರದ ಇಲಾಖೆಗಳಿಗೆ ತೆರಿಗೆ ಭರಿಸುವ ಉದ್ಯಮ ಪ್ರದೇಶಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾದಲ್ಲಿ, ನಗರದ ಉದ್ಯಮದ ಮೇಲೆ ಧಕ್ಕೆಯುಂಟಾಗುವುದಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ”ಈ ಘಟನೆಯ ಬಗ್ಗೆ ಪೊಲೀಸ್ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯಿಂದ ಸತ್ಯ ಸಂಗತಿ ಹೊರಬರಲಿದೆ. ನಗರದ ಶಾಲಾ-ಕಾಲೇಜು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬ ವಿಷಯ ಮೊನ್ನೆ ನಡೆದ(ಅಶ್ಲೀಲ ಚುಂಬನ ಸ್ಪರ್ಧೆ) ಘಟನೆಯಿಂದ ವ್ಯಕ್ತವಾಗಿದೆ. ಪರಿಸ್ಥಿತಿ ಹೀಗಿರುವಾಗ ಅಪ್ರಾಪ್ತ ಮಕ್ಕಳಿಗೆ ಪಬ್, ಬಾರ್‌ಗಳಲ್ಲಿ ಮದ್ಯ ಸರ್ವ್ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ. ಎಲ್ಲ ಕ್ಷೇತ್ರಗಳಲ್ಲಿ ಕಾನೂನು ಪಾಲನೆಯಾಗಬೇಕು. ಈ ವಿಷಯದಲ್ಲಿ ಪಬ್, ಬಾರ್ ಮಾಲಕರು, ಮ್ಯಾನೇಜರ್‌ಗಳಿಗೂ ಜವಾಬ್ದಾರಿ ಇದೆ” ಎಂದರು.

By Suddi9

Leave a Reply

Your email address will not be published. Required fields are marked *