ಕೈಕಂಬ : ಗುರುಪುರದ ದೋಣಿಂಜೆ ಪ್ರದೇಶದಲ್ಲಿ ಮೇ.08ರಂದು ಭಾನುವಾರ ಮಧ್ಯಾಹ್ನ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೂರಾರು ಎಕ್ರೆ ಹಡೀಲು ಭೂಮಿಯಲ್ಲಿ ಹುಲುಸಾಗಿ ಬೆಳೆದಿದ್ದ ಒಣಹುಲ್ಲಿನ ಸಹಿತ ಹಲವು ತಾಳೆ, ಈಚಲು, ಮಾವು ಹಾಗೂ ಹಲಸಿನ ಮರಗಳು ಸುಟ್ಟು ಕರಕಲಾಗಿವೆ.
ಸಂಜೆಯಾಗುತ್ತಲೇ ಕುಕ್ಕುದಕಟ್ಟೆ ಭಾಗದತ್ತ ಬೆಂಕಿ ಕೆನ್ನಾಲಿಗೆ ವ್ಯಾಪಿಸಿದ್ದು, ಸಿಕ್ಕಿಸಿಕ್ಕ ಮರಗಳು ಬೆಂಕಿಗಾಹುತಿಯಾಗಿವೆ. ಈ ಭಾಗದಲ್ಲಿ ಗೇಲ್ ಕಂಪೆನಿಯವರು ಭೂಮಿಯೊಳಗಡೆ ಅಳವಡಿಸಿದ ಗ್ಯಾಸ್ ಪೈಪ್‌ಲೈನ್ ಸಂಪರ್ಕದ ಸೆನ್ಸಾರ್‌ಗೆ ಹಾನಿಯುಂಟಾಗಿದ್ದು, ಕಂಪೆನಿ ಕಾರ್ಮಿಕರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಅಗ್ನಿಶಾಮಕ ದಳದವರು ಕಂಪೆನಿಯ ಉಪಕರಣಗಳಿಗೆ ಹಾನಿಯಾಗದಂತೆ ಒಂದು ಕಡೆಯಿಂದ ಬೆಂಕಿ ನಂದಿಸಿದರೂ, ಮತ್ತೊಂದು ಕಡೆಯಲ್ಲಿ ವ್ಯಾಪಕವಾಗಿ ಹರಡಿಕೊಂಡಿದೆ. ಮಧ್ಯಾಹ್ನದಿಂದ ಸಂಜೆಯವರೆಗೆ ಗಾಳಿ ಪ್ರಮಾಣ ಹೆಚ್ಚಿದ್ದು, ಒಣ ಹುಲ್ಲಿನಲ್ಲಿ ಬೆಂಕಿ ಸಲೀಸಾಗಿ ಮುಂದೆ ಚಲಿಸಿದೆ.
ಮೂರು ಮಾವಿನ ಮರದಲ್ಲಿ ಬೆಳೆದಿದ್ದ ಮಾವು ಸಂಪೂರ್ಣ ಬೆಂದು ಹೋಗಿದ್ದರೆ, ನಾಲ್ಕೈದು ತಾಳೆ ಮರಕ್ಕೆ ಬೆಂಕಿ ಹತ್ತಿಕೊಂಡಿದ್ದರಿಂದ ಅದರಲ್ಲಿದ್ದ ತಾಳೆಹಣ್ಣು(ಇರೋಳ್) ಸುಟ್ಟು ಹೋಗಿದೆ. ಬೆಂಕಿ ಕಾಣಿಕೊಂಡಿದ್ದ ಪ್ರದೇಶದಲ್ಲಿ ಭಾರೀ ಜನರು ಜಮಾಯಿಸಿದ್ದು, ಅದೃಷ್ಟವಶಾತ್ ಈ ಬಾರಿ ವಸತಿ ಪ್ರದೇಶದತ್ತ ಬೆಂಕಿ ಹರಡಿಲ್ಲ. ಪರಿಣಾಮ, ಸ್ಥಳೀಯರು ನಿಟ್ಟಿಸಿರು ಬಿಡುವಂತಾಗಿದೆ. ದಾರಿಹೋಕರ ಅಪರಿಚಿತರು ಬೆಂಕಿ ಕೊಟ್ಟಿರಬೇಕೆಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.

