ಕೈಕಂಬ : ಗುರುಪುರ, ವಾಮಂಜೂರು, ಕೈಕಂಬ, ಎಡಪದವು ಮತ್ತು ಕುಪ್ಪೆಪದವು ಶಾಲೆಗಳಲ್ಲಿ ಪೂರ್ಣ ಭದ್ರತೆ ಹಾಗೂ ಸೂಕ್ತ ವ್ಯವಸ್ಥೆಯೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಿತು.
ಈ ಬಾರಿ ಗುರುಪುರ ಸರ್ಕಾರಿ ಪ್ರೌಢಶಾಲೆ, ವಾಮಂಜೂರಿನ ವಿದ್ಯಾಜ್ಯೋತಿ ಶಾಲೆ ಹಾಗೂ ಕುಪ್ಪಪೆದವಿನ ಕಿಲೆಂಜಾರು ಪ್ರೌಢ ಶಾಲೆಯಲ್ಲಿ ಹೊಸದಾಗಿ ಪರೀಕ್ಷೆ ಕೇಂದ್ರ ವ್ಯವಸ್ಥೆ ಮಾಡಲಾಗಿದೆ. ಗುರುಪುರದಲ್ಲಿ ಎಲ್ಲ ೧೩೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಲ್ಲಿ ಗುರುಪುರ, ಅಡ್ಡೂರಿನ ಸಹಾರ ಮತ್ತು ಗುರುಕಂಬಳದ ಯುಕೆಯು ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಕುಪ್ಪೆಪದವಿನ ಕಿಲೆಂಜಾರು ಅರಮನೆ ಪ್ರೌಢಶಾಲೆಯಲ್ಲಿ ಎಲ್ಲ ೧೪೦ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಲ್ಲಿ ಕಲ್ಲಾಡಿ, ಕಾವೇರಿ ಮತ್ತು ಐಡಿಯಲ್ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ವಾಮಂಜೂರಿನ ವಿದ್ಯಾಜ್ಯೋತಿ ಶಾಲೆಯಲ್ಲಿ ೫ ರಿಪೀರ‍್ಸ್ ಸಹಿತ ಎಲ್ಲ ೧೪೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಲ್ಲಿ ವಿದ್ಯಾಜ್ಯೋತಿ, ರೈಮಂಡ್ಸ್, ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆ ಹಾಗೂ ಮೂಡುಶೆಡ್ಡೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಈ ಕೇಂದ್ರದಲ್ಲಿ ಉದರ ಶಸ್ತçಚಿಕಿತ್ಸೆಗೊಳಗಾಗಿ ನಾಲ್ಕು ದಿನಗಳು ಕಳೆದಿರುವ ಮೂಡುಶೆಡ್ಡೆ ಶಾಲೆಯ ವಿದ್ಯಾರ್ಥಿಯೊಬ್ಬ ಪರೀಕ್ಷೆಗೆ ಹಾಜರಾಗಿದ್ದಾನೆ. ಶಾಲಾ ದ್ವಾರದವರೆಗೆ ಪಾಲಕರು ಈತನನ್ನು ಕರೆತಂದರೆ ಬಳಿಕ ಶಿಕ್ಷಕರು ಪರೀಕ್ಷೆ ಕೊಠಡಿಗೆ ಕೊಂಡೊಯ್ದರು.
ಎಡಪದವು ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಮುಚ್ಚೂರು ಮತ್ತು ಎಡಪದವಿನ ೧೦೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಮುತ್ತೂರು ಸರ್ಕಾರಿ ಶಾಲೆಯಲ್ಲಿ ಮಳಲಿ ಮತ್ತು ಮುತ್ತೂರಿನ ಒಟ್ಟು ೧೪೮ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದರೆ, ಕೋವಿಡ್ ಬಾಧಿತ ಉಳಿದಿಬ್ಬರು ವಿದ್ಯಾರ್ಥಿಗಳು ಮೊಡಂಕಾಪುವಿನ ವ್ಯಾಯಾಮ ಶಾಲೆಯಲ್ಲಿ ವ್ಯವಸ್ಥೆಗೊಳಿಸಲಾಗಿದ್ದ ಕೇಂದ್ರದಲ್ಲಿ ಪರೀಕ್ಷೆ ಬರೆದಿದರು. ಕೈಕಂಬದ ರೋಸಾ ಮಿಸ್ತಿಕ ಶಾಲೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿತ್ತು.

