ಕೋಲಾರ:- ವೇಮಗಲ್ ಪೊಲೀಸ್ ಠಾಣೆಯನ್ನು ವೃತ್ತ ನಿರೀಕ್ಷಕ ಹಂತದ ಠಾಣೆಯಾಗಿ ಹಾಗೂ ನರಸಾಪುರ ಹೊರ ಠಾಣೆಯನ್ನು ಉಪ ಆರಕ್ಷಕ ನಿರೀಕ್ಷಕರ ಠಾಣೆಯನ್ನಾಗಿ ಮೇಲ್ದರ್ಜೆಗೆ ಏರಿಸಿ ಆದೇಶಿಸಿರುವ ಸರ್ಕಾರ,ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಗೃಹ ಸಚಿವರಿಗೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಧನ್ಯವಾದ ಸಲ್ಲಿಸಿದ್ದಾರೆ.15kolar12

ಕಳೆದ ಮಾರ್ಚ್ 21 ರಂದು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದ ಸುದರ್ಶನ್ ವೇಮಗಲ್ ಹೋಬಳಿ ಜಿಲ್ಲೆಯಲ್ಲೇ ಅತಿ ಹೆಚ್ಚು ಭೌಗೋಳಿಕ ವಿಸ್ತೀರ್ಣ ಹೊಂದಿದ್ದು, ಇಲ್ಲಿರುವ ಸಬ್‍ಇನ್ಸ್‍ಪೆಕ್ಟರ್ ಹಂತದ ಠಾಣೆ ವ್ಯಾಪ್ತಿಗೆ ವೇಮಗಲ್, ನರಸಾಪುರ ಹೋಬಳಿಯ ಎಲ್ಲಾ ಹಳ್ಳಿಗಳು, ಸುಗಟೂರು ಹಾಗೂ ವಕ್ಕಲೇರಿ ಹೋಬಳಿಯ ತಲಾ ಒಂದೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಬರುತ್ತವೆ ಎಂದು ತಿಳಿಸಿದ್ದರು.
ಜತೆಗೆ 2013 ರಿಂದ ವೇಮಗಲ್ ಕೈಗಾರಿಕಾ ಪ್ರದೇಶವು ಕೆಐಎಡಿಬಿ ವತಿಯಿಂದ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಬೃಹತ್ ಕೈಗಾರಿಕಾ ಪ್ರದೇಶವಾಗಿಯೂ ಆರಂಭಗೊಂಡಿದೆ, ಕಳೆದ 2009 ರಿಂದ ನರಸಾಪುರ ಕೈಗಾರಿಕಾ ಪ್ರದೇಶವೂ ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಪ್ರಾರಂಭಗೊಂಡಿದ್ದು, ಇಲ್ಲಿ ಸಾವಿರಾರು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದರಿಂದಾಗಿ ಸ್ಥಳೀಯವಾಗಿ ವ್ಯವಸಾಯ, ವ್ಯಾಪಾರ, ವ್ಯವಹಾರ, ವಹಿವಾಟುಗಳು ಕೈಗಾರಿಕಾ ಚಟುವಟಿಕೆಗಳು ದ್ವಿಗುಣ ಹೊಂದುತ್ತಿವೆ, ಹಾಗೂ ಇತ್ತೀಚೆಗೆ ಸರ್ಕಾರ ವೇಮಗಲ್-ಕುರಗಲ್‍ಅನ್ನು ಪಟ್ಟಣ ಪಂಚಾಯಿತಿಯನ್ನಾಗಿ ಘೋಷಿಸಿದೆ, ಈ ಹಿನ್ನಲೆಯಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ದಿ ಹಾಗೂ ಸಾರ್ವಜನಿಕರ ಹಿತ ರಕ್ಷಣೆ, ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಠಾಣೆ ಮೇಲ್ದರ್ಜೆಗೆ ಏರಿಸಬೇಕು ಎಂದು ಕೋರಿದ್ದರು.
ಈ ಹಿನ್ನಲೆಯಲ್ಲಿ ರಾಜ್ಯದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆದೇಶ ಹೊರಡಿಸಿ ವೇಮಗಲ್ ಪೊಲೀಸ್ ಠಾಣೆಯನ್ನು ವೃತ್ತ ನಿರೀಕ್ಷಕ ಹಂತದ ಠಾಣೆಯಾಗಿ ಹಾಗೂ ನರಸಾಪುರವನ್ನು ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಹಂತದ ಠಾಣೆಯಾಗಿ ಮೇಲ್ದರ್ಜೆಗೆ ಏರಿಸಿದ್ದಾರೆ. ಮತ್ತು ಈ ಠಾಣೆಗಳಿಗೆ ಅಗತ್ಯ ಸಿಬ್ಬಂದಿ ಜತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಸುದರ್ಶನ್ ಮನವಿ ಮಾಡಿದ್ದಾರೆ.
ತಮ್ಮ ಮನವಿಗೆ ಸ್ಪಂದಿಸಿ ಆದೇಶ ಹೊರಡಿಸಿದ್ದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೇರಿದಂತೆ ಎಲ್ಲರಿಗೂ ಸುದರ್ಶನ್ ಧನ್ಯವಾದ ಸಲ್ಲಿಸಿದ್ದಾರೆ.

By Suddi9

Leave a Reply

Your email address will not be published. Required fields are marked *