ಬಂಟ್ವಾಳ:ಪರಿಪೂರ್ಣ ವೈದ್ಯರ ಸಹಿತ ಪ್ರಸ್ತುತ ಸಕಲ ಸೌಕರ್ಯವನ್ನೊಳಗೊಂಡ ಬಂಟ್ವಾಳ ನಗರ ಪ್ರದೇಶದಲ್ಲಿರುವ ಸಮುದಾಯ ಆರೋಗ್ಯಕೇಂದ್ರಕ್ಕೆ ಬಹುದಿನದ ಬೇಡಿಕೆಯಲ್ಲೊಂದಾದ ಶೈತ್ಯಾಗಾರದ ವ್ಯವಸ್ಥೆಯು ಈಡೇರುವ ಕಾಲ ಸನ್ನಿಹಿತವಾಗಿದೆ. ಬಂಟ್ವಾಳ ಲಯನ್ಸ್ ಕ್ಲಬ್ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಅವರ ಪ್ರಸ್ತಾವನೆಯನ್ನು ಪರಿಗಣಿಸಿ ಸದ್ಯಕ್ಕೆ ಎರಡು ಶೈತ್ಯಾಗಾರವನ್ನು ಕೊಡುಗೆಯಾಗಿ ನೀಡಲು ಮುಂದಾಗಿದೆ.ಅವಶ್ಯಕತೆ ಕಂಡುಬಂದಲ್ಲಿ ಮತ್ತೆರಡು ಶೈತ್ಯಾಗಾರವನ್ನು ಲಯನ್ಸ್ ಕ್ಲಬ್ ನಿಂದ ಒದಗಿಸಲಾಗುವುದು ಎಂದು ಕ್ಲಬ್ ನ ಮಾಜಿ ಅಧ್ಯಕ್ಷ ಜಯಂತ್ ಶೆಟ್ಟಿ ತಿಳಿಸಿದ್ದಾರೆ. 
ಮುಂದಿನ ತಿಂಗಳ ನ.29 ರಂದು ಲಯನ್ಸ್ ಕ್ಲಬ್ ನ ರಾಜ್ಯಪಾಲರ ಅಧಿಕೃತ ಪ್ರವಾಸದಂದು ಕ್ಲಬ್ ನ ಪ್ರಾಂತ್ಯಧ್ಯಕ್ಷ ಲ.ಸಂಜೀವಶೆಟ್ಟಿ ಅವರ ನೇತೃತ್ವದಲ್ಲಿ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಎರಡು ಶೈತ್ಯಾಗಾರವನ್ನು ಪೂರೈಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಯಾಕಾಗಿ ಶೈತ್ಯಾಗಾರ? :
100 ಬೆಡ್ ನ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿರುವ ಬಂಟ್ವಾಳ ಸಮುದಾಯ ಕೇಂದ್ರದಲ್ಲಿ ಪ್ರಸ್ತುತ ಎಲ್ಲಾ ರೀತಿಯ ವ್ಯವಸ್ಥೆಯನ್ನು ಹೊಂದಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮುತುವರ್ಜಿಯಿಂದ ಆರಿವಳಿಕೆ ತಜ್ಞ ವೈದ್ಯರ ಸಹಿತ ಎಲ್ಲಾ ವಿಭಾಗದಲ್ಲು ನುರಿತ ವೈದ್ಯರು,ಡಯಾಲಿಸಿಸ್ ಯಂತ್ರ ಸೇರಿದಂತೆ ಸಕಲ ವ್ಯವಸ್ಥೆಯು ಸಮುದಾಯ ಆರೋಗ್ಯಕೇಂದ್ರದಲ್ಲಿದೆ. ಇತ್ತೀಚೆಗೆ ಶಾಸಕ ರಾಜೇಶ್ ನಾಯ್ಕ್ ಅವರ ಮನವಿಯ ಮೇರೆಗೆ ಡಾ.ಪದ್ಮನಾಭ ಕಾಮತ್ ಅವರ ನೇತೃತ್ವದ ಕ್ಯಾಡ್ ಫೌಂಡೇಶನ್ ಹೃದಯಸಂಬಂಧಿ ಖಾಯಿಲೆ ಪತ್ತೆಹಚ್ಚುವ ಎರಡು ಇಸಿಜಿ ಯಂತ್ರವನ್ನು ಕೊಡುಗೆಯಾಗಿ ನೀಡಿದೆ. ಹಾಗೆಯೇ ಶಾಸಕರ ಮನವಿಯ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಎರಡು ಡಯಾಲಿಸಿಸ್ ಯಂತ್ರ ಕೊಡಿಸುವ ಭರವಸೆಯನ್ನು ನೀಡಿದ್ದು,ಶೀಘ್ರದಲ್ಲಿಯೇ ಪೂರೈಕೆಯಾಗುವ ನಿರೀಕ್ಷೆ ಇದೆ. ಆದರೆ ಈ ಆಸ್ಪತ್ರೆಯಲ್ಲಿ ಶೈತ್ಯಾಗಾರದ ಕೊರತೆ ಇತ್ತು. 
ತಾಲೂಕಿನ ಯಾವುದೇ ಭಾಗದಲ್ಲಿ ರಸ್ತೆ ಅಪಘಾತ,ಕೊಲೆ ಪ್ರಕರಣ ಸಂಬಂಧಿಸಿ ಮೃತದೇಹ ಇಲ್ಲವೇ ಅಪರಿಚಿತ ಶವಗಳು ಪತ್ತೆಯಾದಲ್ಲಿ ಅಂತಹ ಶವಗಳನ್ನು ಪೊಲೀಸರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಯ ಶೈತ್ಯಾಗಾರದಲ್ಲಿರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯ ಶೈತ್ಯಾಗಾರಕ್ಕೆ ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ.ಈ ಬಾಡಿಗೆ ಹಣವನ್ನು ಪೊಲೀಸ್ ಠಾಣೆಯ ಅಧಿಕಾರಿಗಳು ಇಲ್ಲವೇ ಸಿಬ್ಬಂದಿಗಳು ತಮ್ಮ ಕೈಯಿಂದಲೇ ಪಾವತಿಸಬೇಕಾಗುತ್ತದೆ. ಅನಾಥ ಶವಗಳು ಪತ್ತೆಯಾದಲ್ಲಿ ಅದರ ವಾರೀಸುದಾರರಿಗಾಗಿ ಕಾಯಬೇಕಾದ ಹಿನ್ನಲೆಯಲ್ಲಿ ಒಂದಷ್ಟು ದಿನ ಶವವನ್ನು ಶೈತ್ಯಾಗಾರದಲ್ಲಿರಿಸಬೇಕಾಗುತ್ತದೆ.
ಖಾಸಗಿ ಆಸ್ಪತ್ರೆಯಲ್ಲಿ ಶೈತ್ಯಾಗರದ ಅಷ್ಟುದಿನದ ಬಾಡಿಗೆ ಸಾವಿರಾರು ರೂಪಾಯಿ ಆಗುವುದರಿಂದ ಆಗ ಪೊಲೀಸರ ಜೇಬಿಗೆ ಕತ್ತರಿ ಬೀಳುತ್ತದೆ. ಹಾಗಾಗಿ ಬಂಟ್ವಾಳ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಈ ಹಿಂದೆ ತಾಲೂಕು ಕೆಡಿಪಿ ಸಭೆಯಲ್ಲಿ ಶಾಸಕರ ಗಮನಸೆಳೆದಿದ್ದರು. ಹೊಸದಿಗಂತವು ಈ ಬಗ್ಗೆ ಹಿಂದೆ ವಿಶೇಷ ವರದಿ ಪ್ರಕಟಿಸಿದನ್ನು ನೆನಪಿಸಬಹುದಾಗಿದೆ. ಶಾಸಕ ರಾಜೇಶ್ ನಾಯ್ಕ್,ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಅವರು ಈ ವಿಚಾರದಲ್ಲಿ ವಿಶೇಷ ಆಸಕ್ತಿಯನ್ನು ವಹಿಸಿದ್ದರು.ಬಳಿಕ ಬಂಟ್ವಾಳ ಲಯನ್ಸ್ ಕ್ಲಬ್ ಇದಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಲಯನ್ಸ್ ಕ್ಲಬ್ ಇದೀಗ ಎರಡು ಶೈತ್ಯಾಗರವನ್ನು ಬಂಟ್ವಾಳ ಸಮುದಾಯ ಆರೋಗ್ಯಕೇಂದ್ರಕ್ಕೆ ಕೊಡುಗೆಯಾಗಿ ನೀಡಲು ನಿರ್ಧರಿಸಿದ್ದು ಇದರೊಂದಿಗೆ ಈ ಕೊರತೆಯನ್ನು ನೀಗಿಸಿದೆ. ಪೊಲೀಸರು ಕೂಡ ನಿಟ್ಟುಸಿರು ಬಿಡುವಂತಾಗಿದೆ.
