ಕೈಕಂಬ : ಅಬುದಾಬಿಯಲ್ಲಿ ಜೂನ್ 5ರಂದು ಹೃದಯಾಘಾತದಿಂದ ಮೃತಪಟ್ಟ ಅಡ್ಡೂರು ಗ್ರಾಮದ ನೂಯಿಗೆ ಹತ್ತಿರದ ಪುಣಿಕೋಡಿಯ ನಿವಾಸಿ ಯುವಕ ಯಶವಂತ ಪೂಜಾರಿ(37) ಅವರ ಅಂತ್ಯ ಸಂಸ್ಕಾರ ಭಾನುವಾರ ಮುಂಜಾನೆ ಬಡಕಬೈಲಿನ ರುದ್ರಭೂಮಿಯಲ್ಲಿ ನಡೆಯಿತು.
ಅಬುದಾಬಿಯಲ್ಲಿ ಮೃತಪಟ್ಟ ಅಪರಿಚಿತ ಯುವಕನ ಭಾವಚಿತ್ರವೊಂದು ಜೂ. 7ರಂದು ವಾಟ್ಸಾಪ್‍ನಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಗುರುಪುರದ ಸಮಾಜಸೇವಾ ಮನೋಭಾವದ ಭಾಗ್ಯರಾಜ್ ಎಂಬವರು ಮೃತನ ಹುಡುಕಾಟಕ್ಕೆ ಪ್ರಯತ್ನಿಸಿದ. ಮೊದಲಿಗೆ ಈತ ಎಲ್ಲಿಯನೆಂದೇ ಗೊತ್ತಾಗಿಲ್ಲ. ಎರಡನೇ ದಿನಕ್ಕೆ ತನ್ನ ಸಂಪರ್ಕಕ್ಕೆ ಸಿಕ್ಕಿದ ನೂಯಿಯ ಮುಜಾಮ್ಮಿಲ್ ಎಂಬೊಬ್ಬರು ನೀಡಿದ ಸಲಹೆಯಂತೆ ತೋಡಾರಿನ ಆದರ್ಶ ಆಂಗ್ಲ ಮಾಧ್ಯಮ ಶಾಲೆಯ `ಎಂಡಿ’ ಆಸೀಫ್ ಸೂರಲ್ಪಾಡಿ ಸಹಾಯ ಪಡೆದು ದುಬೈ ಉದ್ಯಮಿ ಅನಿವಾಸಿ ಕನ್ನಡಿಗರ ಒಕ್ಕೂಟದ ಅಧ್ಯಕ್ಷ ಹಿದಾಯಿತ್ ಅಡ್ಡೂರು ಅವರನ್ನು ಸಂಪರ್ಕಿಸಲಾಯಿತು.
ಅವರ ನಿರ್ದೇಶನದ ಮೇರೆಗೆ ಅಬುದಾಬಿಯ ರಶೀದ್ ಬಿಜೈಯನ್ನು ಸಂಪರ್ಕಿಸಿ, ಆ ಮೂಲಕ ಯುವಕನ ಗುರುತು ಪತ್ತೆ ಹಚ್ಚಿ, ಊರಿಗೆ ಶವ ರವಾನಿಸುವ ಪ್ರಕ್ರಿಯೆ ಆರಂಭಿಸಲಾಯಿತು. ಪೂಜಾರಿಯ ಸ್ನೇಹಿತ ಶ್ರೀಧರ್, ಪರಿಚಯಸ್ಥ ಸರ್ಫುದ್ದೀನ್ ಹಾಗೂ ಇನ್ನೂ ಅನೇಕ ಮುಸ್ಲಿಂ-ಹಿಂದೂ ಯುವಕರು ಶವ ರವಾನಿಸುವ ಪ್ರಕ್ರಿಯೆಗೆ ಸರ್ಕಾರಿ ಮಟ್ಟದಲ್ಲಿ ಕೆಲಸ ಮಾಡಿದರು.
ಅನಾಥನಂತಿದ್ದ : ಶಂಕೆ
ಮೂರು ವರ್ಷದ ಹಿಂದೆ ಅಬುದಾಬಿಗೆ ತೆರಳಿದ್ದ ಯಶವಂತ್ ಏಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಒಂದೂವರೆ ವರ್ಷದ ಹಿಂದೆ ಊರಿಗೆ ಬಂದಿದ್ದ ಇವರು ಮತ್ತೆ ವಿದೇಶಕ್ಕೆ ತೆರಳಿದ್ದರು. ಇತ್ತೀಚಿನ ಎಂಟು ತಿಂಗಳಿಂದ ಇವರ ವೀಸಾ ಅವಧಿ ಮುಗಿದಿತ್ತು ಮತ್ತು ಪಾಸ್‍ಪೋರ್ಟ್ ನಾಪತ್ತೆ ಆಗಿತ್ತು ಎಂಬ ವಿಷಯ ತನಿಖೆಯಿಂದ ವ್ಯಕ್ತವಾಯಿತು. ಈ ಕಾರಣಕ್ಕಾಗಿಯೇ ಅಬುದಾಬಿಯಲ್ಲಿ ಈತನ ವಾಸ್ತವ್ಯ ಎಲ್ಲಿ ಎಂಬುದು ಈವರೆಗೂ ಗೊತ್ತಾಗಿಲ್ಲ.
ರಶೀದ್ ಮತ್ತು ಅವರ ಬಳಗದವರು ಶವ ಸಾಗಾಟದ ಎಲ್ಲ ಖರ್ಚು ಭರಿಸಿದ್ದು, ಜೂ. 20ರಂದು ಸಂಜೆ 5 ಗಂಟೆಗೆ ಖಾಸಗಿ ಕಾರ್ಗೋ ವಿಮಾನದಲ್ಲಿ ಕ್ಯಾಲಿಕಟ್‍ಗೆ ಶವ ಕಳುಸಿದ್ದು, ಅಲ್ಲಿಂದ ರಾತ್ರಿ 7ಕ್ಕೆ ಹೊರಟಿದ್ದ ಖಾಸಗಿ ಆ್ಯಂಬುಲೆನ್ಸ್ ಮಂಗಳೂರಿನ ಮೂಲಕ ಭಾನುವಾರ ಮುಂಜಾನೆ 5 ಗಂಟೆಗೆ ಪುಣಿಕೋಡಿಗೆ ತಲುಪಿದೆ. ಆರು ಗಂಟೆಗೆ ಅಂತ್ಯ ಸಂಸ್ಕಾರ ಪೂರ್ಣಗೊಂಡಿದೆ.
ತಂದೆ ಸಾವಿನ ದುಃಖದಲ್ಲೇ ಪೂಜಾರಿ
ಹುಡುಕಾಟ ನಡೆಸಿದ ಭಾಗ್ಯರಾಜ್…
ಯಶವಂತ ಪೂಜಾರಿ ಶವ ತರುವಲ್ಲಿ ಕೊಲ್ಲಿ ರಾಷ್ಟ್ರದಲ್ಲಿದ್ದ ಮುಸ್ಲಿಂ ಬಂಧುಗಳ ಸಹಕಾರ ಎಷ್ಟಿತ್ತೋ ಅಷ್ಟೇ ಕೆಲಸ ಗುರುಪುರದ ಭಾಗ್ಯರಾಜ್ ಮಾಡಿದ್ದಾರೆ. ಅಚ್ಚರಿಯೆಂದರೆ, ಈತ ಮತ್ತಾರೂ ಅಲ್ಲ, ಜೂ. 12ರಂದು ಗುರುಪುರದ ಮಠದಗುಡ್ಡೆಯಲ್ಲಿ ಮನೆ ಆವರಣ ಗೋಡೆ ಬಿದ್ದು ಮೃತಪಟ್ಟಿರುವ ನಾರಾಯಣ ನಾಯ್ಕರ ಪುತ್ರ. ತಂದೆ ಸಾವಿನ ಮುಂಚೆ ಅಪರಿಚಿತ ಯುವಕನ ಹುಡುಕಾಟದಲ್ಲಿ ನಿರತನಾಗಿದ್ದ ಭಾಗ್ಯರಾಜ್ ಪಾಲಿಗೆ ಜೂ. 12 ಬರಸಿಡಲು ಬಡಿದಂತಾಗಿತ್ತು.
ತಂದೆ ಮೃತಪಟ್ಟಿದ್ದು, ಮನೆಯವರೆಲ್ಲ ದುಃಖದಲ್ಲಿದ್ದರೂ, ಸಮಾಜಸೇವೆಯ ತುಡಿತದ ಈ ಯುವಕ ಇನ್ನೊಂದು ಮನೆಯ ದುಃಖ ನಿವಾರಿಸಲು ಪ್ರಯತ್ನ ಮುಂದುವರಿಸಿದ್ದರು. ಭಾನುವಾರದಂದು ಅಂತ್ಯ ಸಂಸ್ಕಾರಕ್ಕೆ ಪುಣಿಕೋಡಿಗೆ ಬಂದಿದ್ದ ಭಾಗ್ಯರಾಜ್, ಮೃತ ಯುವಕನ ಶವ ತರುವಲ್ಲಿ ಸಹಕರಿಸಿದ ಮುಸ್ಲಿಂ ಮತ್ತು ಹಿಂದೂ ಬಾಂಧವರ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಈವರೆಗಿನ ಖರ್ಚುವೆಚ್ಚು ಭರಿಸಿರುವ ಅಬುದಾಬಿ-ದುಬೈ ಮೂಲದ ಮುಸ್ಲಿಂ, ಹಿಂದೂ ಬಾಂಧವರು, ಯಶವಂತನಿಗೆ ಸರ್ಕಾರದ ಪರವಾಗಿ ಸಿಗಬೇಕಾದ ಪರಿಹಾರ ಪಡೆಯಲು ಪ್ರಯತ್ನದಲ್ಲಿದ್ದಾರೆ. ಒಂದೊಮ್ಮೆ ಆ ಮೊತ್ತ ಸಿಕ್ಕಿದರೆ, ಅದನ್ನು ಯಶವಂತ ಪೂಜಾರಿಯ ತಾಯಿಗೆ(ಲಲಿತಾ) ನೀಡಲು ನಿರ್ಧರಿಸಿದ್ದಾರೆಂದು ಭಾಗ್ಯರಾಜ್ ತಿಳಿಸಿದರು.
