ಬಂಟ್ವಾಳ: ತಾಲೂಕಿನ ಸಜೀಪ ನಡು ಗ್ರಾಮದಲ್ಲಿ ಎಳೆಯ ಕಂದಮ್ಮನಿಗೆ ಪ್ರಥಮ ಕೊರೊನೊ ಪ್ರಕರಣ ಪತ್ತೆಯಾಗಿರುವ ಹಿನ್ನಲೆಯಲ್ಲಿ ಸ್ಥಳೀಯವಾಗಿ ಆತಂಕ ಉಂಟಾಗಿದೆ. 10 ತಿಂಗಳ ಕಂದಮ್ಮನಿಗೆ ಕೊರೊನೊ ಪತ್ತೆಯಾಗಿರುವ ಸುದ್ದಿಯನ್ನು ಎಂಬ ಸುದ್ದಿಯನ್ನು ಜಿಲ್ಲಾಧಿಕಾರಿಯವರು ದೃಢಪಡಿಸಿದ್ದಾರೆ. ಮಗುವಿಗೆ ಜ್ವರ,ಉಸಿರಾಟದಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಮಾ.೨೩ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.೨೪ರಂದು ಮಗುವಿನ ಗಂಟಲು ದ್ರವವನ್ನು ತಪಾಸಣೆಗಾಗಿ ಕಳುಹಿಸಲಾಗಿತ್ತು.

ಮಾ. ೨೬ರಂದು ಕೊವಿಡ್೧೯ ಪಾಸಿಟಿವ್ ದೃಡಪಟ್ಟಿತ್ತು ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ. ಇದೀಗ ಮಗುವಿನ ಹತ್ತಿರದ ಸಂಬಂಧಿಗಳನ್ನುನಿಗಾವಣೆಯಲ್ಲಿರಿಸಲಾ ಗಿದೆ.ಈ ಮೂಲಕ ಜಿಲ್ಲೆಯ ಲ್ಲಿ ಒಟ್ಟು ಕೊರೊನೊ ಪ್ರಕರಣಗಳ ಸಂಖ್ಯೆ ಆರಕ್ಕೇರಿದಂತಾಗಿದೆ.ಈವರಗೆ ಹೊರಗಿನಿಂದ ವ್ಯಕ್ತಿಗಳಿಗೆ ಮಾತ್ರ ಸೊಂಕು ತಗಲಿತ್ತು ಸಾಮುದಾಯಿಕ ವಾಗಿಲ್ಲ ಎಂಬ ವಿಶ್ವಾಸದ ಮೂಲಕ ಜನ ಬೇಕಾಬಿಟ್ಟಿ ತಿರುಗಾಡ ನಡೆಸುತ್ತಿದ್ದರು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರೆತಿದ್ದರು.ಇನ್ನು ಮುಂದೆ ಹಾಗಾಗಲ್ಲ ಅಧಿಕಾರಿಗಳು ಹೆಚ್ಚಿನ ಕ್ರಮಕೈಗೊಳ್ಳುವ ಸಾಧ್ಯತೆ ಗಳಿವೆ.
ಸಜೀಪ ನಡು ಗ್ರಾಮದ ಲಕ್ಷಣ ಕಟ್ಟೆ ಎಂಬಲ್ಲಿ ನ 10 ತಿಂಗಳ ಪುಟ್ಟ ಮಗುವಿನಲ್ಲಿ ಕೊರೊನೊ ಪ್ರಕರಣ ಪತ್ತೆಯಾಗಿದ್ದು ಇಲ್ಲಿನ ಸುತ್ತಮುತ್ತ ಸಾಕಷ್ಟು ಬಿಗಿ ಭದ್ರತೆ ಯನ್ನು ಮಾಡಲಾಗಿದೆ.
ಈವರೆಗೆ ವಿದೇಶದಿಂದ ಬಂದ ವ್ಯಕ್ತಿಗಳಲ್ಲಿ ಮಾತ್ರ ಕೊರೊನೊ ಪ್ರಕರಣ ಪತ್ತೆಯಾಗಿತ್ತು, ಆದರೆ ಪ್ರಸ್ತುತ ಸಜೀಪದ ಗ್ರಾಮೀಣ ಪ್ರದೇಶದ ಮಗುವಿನಲ್ಲಿ ಕೊರೊನೊ ಪತ್ತೆಯಾದ ಪ್ರಥಮ ಪ್ರಕರಣವಾಗಿದ್ದು, ಜಿಲ್ಲೆಯ ಹಾಗೂ ತಾಲೂಕಿನ ಜನರನ್ನು ಭಯಭೀತರನ್ನಾಗಿಸಿದೆ.
ಈ ಪ್ರದೇಶದ ಸುತ್ತಮುತ್ತಲ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಇವರ ಮನೆಗೂ ಯಾರು ಹೋಗದಂತೆ ಈಗಾಗಲೇ ಬಂಟ್ವಾಳ ಗ್ರಾಮಾಂತರ ಎಸ್.ಐ ಪ್ರಸನ್ನ ನೇತ್ರತ್ವದಲ್ಲಿ ನಾಕಾ ಬಂದಿ ಮಾಡಲಾಗಿದೆ.ಇಡೀ ಗ್ರಾಮ ವನ್ನು ಕ್ವಾರಂಟೇನ್ ಗ್ರಾಮವನ್ನಾಗಿ ಗುರುತಿಸಲಾಗಿದೆ.ಈ ಗ್ರಾಮಕ್ಕೆ ಬರುವಂತಿಲ್ಲ ಹಾಗೂ ಹೊರಗೆ ಹೋಗದಂತೆ ಪೋಲೀಸರು ಸಂಪೂರ್ಣ ಬಂದ್ ಮಾಡಿದ್ದಾರೆ.ಅಲ್ಲಿನ ಸ್ಥಳೀಯ ನಿವಾಸಿಗಳಿಗೂ ಎಚ್ಚರಿಕೆ ನೀಡಲಾಗಿದೆ.
ಗುರುವಾರ ಸಂಜೆಯ ವೇಳೆಗೆ ಈ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು,ಆದರೆ ಜಿಲ್ಲಾಡಳಿತ ಈ ಬಗ್ಗೆ ದೃಢ ಪಡಿಸಿರಲಿಲ್ಲ,ಹಾಗಾಗಿ ಸ್ಥಳೀಯವಾಗಿ ಜನರಲ್ಲಿ ಗೊಂದಲ ಉಂಟಾಗಿತ್ತು.ಶುಕ್ರವಾರ ಮಗುವಿಗೆ ಕೊರೋನ ದೃಢ ಪಟ್ಟ ವಿಚಾರವನ್ನು ಬಹಿರಂಗ ಪಡಿಸುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಇದೀಗ ಪರಿಸರದಲ್ಲಿ ಎಲ್ಲಾ ರೀತಿಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದ್ದು,ಮೆಲ್ಕಾರ್ ಮೂಲಕ ಸಜೀಪ, ಮಂಗಳೂರಿಗೆ ಸಂಚರಿಸುವವರಿಗೆ ಬ್ರೇಕ್ ಹಾಕಲಾಗಿದೆ.
ಅನಗತ್ಯವಾಗಿ ತಿರುಗಾಡುವವರನ್ನು ಎಚ್ಚರಿಕೆ ನೀಡಿ ವಾಪಾಸ್ ಕಳುಹಿಸಲಾಗುತ್ತಿದೆ. ಕಂದಮ್ಮನಿಗೆ ಕೊರೋನಾ ದೃಢವಾದ ಸುದ್ದಿ ಹರಡುತ್ತಿದ್ದಂತೆ ಬಂಟ್ವಾಳ ನಗರ ಪರಿಸರದಲ್ಲಿ ಶುಕ್ರವಾರ ನಿಗದಿತ ಸಮಯಕ್ಕೆ ಮುಂಚಿತವಾಗಿಯೇ ಅಂಗಡಿ ಮುಂಗಟ್ಟು ಮುಚ್ಚಲಾಯಿತು.ಜನರ ,ವಾಹನ ಸಂಚಾರವು ಕಡಿಮೆಯಿತ್ತು.ಅನಗತ್ಯ ತಿರುಗಾಡುವವರ ಸಂಖ್ಯೆಯು ವಿರಳವಾಗಿತ್ತು.
