ಕೋಲಾರ :  ತಾಲ್ಲೂಕಿನ ಚಿನ್ನಾಪುರ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ನಬಾರ್ಡ್‍ನ ಮುಖ್ಯ ಮಹಾಪ್ರಬಂಧಕ ಪಿ.ವಿ.ಎಸ್. ಸೂರ್ಯಕುಮಾರ್, ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆದ ಮಹಿಳೆಯರು ಕೈಗೊಂಡಿರುವ ಆರ್ಥಿಕ ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಡಿಸಿಸಿ ಬ್ಯಾಂಕ್‍ಗೆ ಆಗಮಿಸಿ ಬ್ಯಾಂಕ್ ಪ್ರಗತಿ ಗಮನಿಸಿದ ನಂತರ ನೇರವಾಗಿ ಚಿನ್ನಾಪುರಕ್ಕೆ ಆಗಮಿಸಿದ ಅವರು, ಡಿಸಿಸಿ ಬ್ಯಾಂಕ್‍ನಿಂದ ಸಾಲ ಪಡೆದ ರೀತಿ, ಪಡೆದ ಸಾಲದ ಸದ್ಬಳಕೆ, ಸಾಲ ಮರುಪಾವತಿಯಲ್ಲಿ ತೋರಿದ ಪ್ರಾಮಾಣಿಕತೆ, ಕೈಗೊಂಡಿರುವ ಆರ್ಥಿಕ ಚಟುವಟಿಕೆ ಮತ್ತಿತರ ಅಂಶಗಳ ಕುರಿತು ಮಹಿಳೆಯರನ್ನು ಪ್ರಶ್ನಿಸಿ ಅವರು ನೀಡಿದ ಉತ್ತರದಿಂದ ಸಂತಸಗೊಂಡರು.

ಗ್ರಾಮದಲ್ಲಿನ ಸಂಘದ ಕೆಲ ಸದಸ್ಯರ ಮನೆಗೆ ನೇರವಾಗಿ ಭೇಟಿ ನೀಡಿ ಹಸು ಖರೀದಿಸಿರುವ ಮತ್ತು ಸೊಸೈಟಿಗೆ ಹಾಲು ಹಾಕುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಆನಂತರ ದೇವಾಲಯದ ಆವರಣದಲ್ಲಿ ಜಮಾಯಿಸಿದ್ದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರೊಂದಿಗೆ ಚರ್ಚಿಸಿ ಪುಸ್ತಕ ನಿರ್ವಹಣೆ, ವಾರದ ಸಭೆ, ಲೆಕ್ಕ ಪರಿಶೋಧನೆ ಬಗ್ಗೆ ಪರಿಶೀಲನೆ ನಡೆಸಿ, ಆರ್ಥಿಕವಾಗಿ ಸಬಲರಾಗಲು ಹೇಗೆ ಏನು ಕ್ರಮಕೈಗೊಂಡಿದ್ದೀರಾ ಹಾಗೂ ಸಂಘ ನಿರ್ವಹಣೆ ಹೇಗೆ ಮಾಡುತ್ತೀರ ಎಂದು ಸಿಜಿಎಂ ಪಿ.ವಿ.ಎಸ್.ಸೂರ್ಯಕುಮಾರ್ ಪ್ರಶ್ನಿಸಿದರು.

18kolar3

ಮಹಿಳಾ ಸಂಘದ ಸದಸ್ಯೆ ನಾರಾಯಣಮ್ಮ ಮಾತನಾಡಿ, ಮೊದಲ ಹಂತದಲ್ಲಿ ಮಹಿಳಾ ಸ್ವ ಸಹಾಯ ಸಂಘದ ಮೂಲಕ ಮಹಿಳೆಯರಿಗೆ ಸಾಲ ಸಿಗುತ್ತದೆ ಎಂಬ ಅರಿವು ಇರಲಿಲ್ಲ, ಇದರ ಮೂಲಕ ಸಾಲ ಪಡೆದುಕೊಂಡವರು ಮಾಹಿತಿ ನೀಡಿದ ಮೇಲೆ ಸಂಘ ರಚನೆ ಮಾಡಿಕೊಂಡು ಆರು ತಿಂಗಳು ನಡೆಸಿದೆವು ಆ ನಂತರ ಸಾಲ ದೊರೆಯಿತು ಎಂದು ಹೇಳಿದರು. ಸಾಲಕ್ಕಾಗಿ ಸಾಕಷ್ಟು ವಾಣಿಜ್ಯ ಬ್ಯಾಂಕ್‍ಗಳಿಗೆ ಸುತ್ತಾಡಿದೆ. ಸಂಘದ ಮೂಲಕ ಶೂನ್ಯ ಬಡ್ಡಿದರದಲ್ಲಿ ಡಿಸಿಸಿ ಬ್ಯಾಂಕ್ ನೀಡಿದ 50 ಸಾವಿರ ಹಣಕ್ಕೆ ಹಸು ಖರೀದಿಸಿದ್ದು, ಡೇರಿಗೆ ಹಾಲು ಸರಬರಾಜು ಮಾಡಿ ಜೀವನ ನಡೆಸುತ್ತಿದ್ದೇನೆ ಎಂದು ವಿವರಿಸಿದರು.

ಪಡೆದುಕೊಂಡಿರುವ ಸಾಲವನ್ನು ಸದುದ್ದೇಶಕ್ಕೆ ಬಳಕೆ ಮಾಡಿಕೊಂಡಿರುವುದರಿಂದ ಸಮರ್ಪಕವಾಗಿ ಮರುಪಾವತಿ ಮಾಡಲಾಗುತ್ತಿದೆ ಎಂದು ತಿಳಿಸಿದರು. ಮತ್ತೊಬ್ಬ ಸದಸ್ಯೆ ಪುಷ್ಪ, ಸಂಕಷ್ಟದಲ್ಲಿದ್ದ ನಮ್ಮ ಪಾಲಿಗೆ ಡಿಸಿಸಿ ಬ್ಯಾಂಕ್ ದೇವರ ರೂಪದಲ್ಲಿ ಧಾವಿಸಿ, ನೆರವು ನೀಡಿದೆ. ಅದರ ನಂಬಿಕೆ ಉಳಿಸಿಕೊಂಡು ಕೆಲಸ ಮಾಡುತ್ತಿದ್ದೇವೆ ಎಂದರು. ಮೊದಲು ಪಡೆದುಕೊಂಡಿರುವ ಸಾಲ ಮರುಪಾವತಿ ಮಾಡಿ, ಮರು ಸಾಲ ಪಡೆದುಕೊಳ್ಳಲಾಗಿದೆ. ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತಿರುವುದು ಇನ್ನು ಹೆಚ್ಚಿನ ಮೊತ್ತ ಕೊಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜಿಎಂ ಪಿ.ವಿ.ಎಸ್. ಸೂರ್ಯಕುಮಾರ್, ಇಂದು ಡಿಸಿಸಿ ಬ್ಯಾಂಕ್ ಇಷ್ಟರ ಮಟ್ಟಿಗೆ ಅಭಿವೃದ್ಧಿಯಾಗಲು ಸ್ತ್ರೀ ಶಕ್ತಿ ಸಂಘಗಳ ಪಾತ್ರ ಮುಖ್ಯವಾದುದು. ಸುತ್ತಮುತ್ತಲಿನ ಪರಿಚಯಿಸ್ತರಿಗೆ ಬ್ಯಾಂಕಿನ ಬಗ್ಗೆ ಅರಿವು ಮೂಡಿಸಿ ಸಂಘದ ಸದಸ್ಯರಾಗಲು ಹೇಳಬೇಕು ಎಂದು ಸಲಹೆ ನೀಡಿದರು.

18kolar3-2

ಡಿಸಿಸಿ ಬ್ಯಾಂಕ್ ಹಾಗೂ ನಬಾರ್ಡ್ ಬ್ಯಾಂಕ್ ಅಭಿವೃದ್ಧಿಯಾಗಲು, ಹೆಚ್ಚಾಗಿ ಸ್ವ ಸಹಾಯ ಸಂಘಗಳ ರಚನೆಯೂ ಹೆಚ್ಚಾಗಬೇಕು. ಆರ್ಥಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು, ಇದರಿಂದ ಸಂಘಗಳ ಆರ್ಥಿಕ ಶಕ್ತಿಯೂ ಹೆಚ್ಚಾಗುತ್ತದೆ ಎಂದು ತಿಳಿಸಿದರು. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು, ಮಹಿಳೆಯರು ಜೀವನಕ್ಕಾಗಿ ಹೈನೋದ್ಯಮದ ಮೇಲೆ ಅವಲಂಭನೆಯಾಗಿದ್ದಾರೆ. ನಿಮ್ಮ ಆರ್ಥಿಕ ಚಟುವಟಿಕೆ ಸಹಕಾರ ಬ್ಯಾಂಕಿನ ಮೂಲಕ ನಡೆಸಬೇಕು. ನಿಮ್ಮಲ್ಲಿ ಉಳಿಕೆಯಾಗಿರುವ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡಬೇಕು ಎಂದು ಸಲಹೆ ನೀಡಿದರು. ಮಹಿಳೆಯರ ಸಬಲಿಕರಣಕ್ಕಾಗಿ ಬ್ಯಾಂಕ್ ಸಾಲ ನೀಡುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಸಂಘಗಳನ್ನು ಹೆಚ್ಚಿಸಲು ಹಾಗೂ ನಿರ್ವಹಣೆ ಮಾಡುವ ಕುರಿತು ತರಬೇತಿ ನೀಡಲಾಗುವುದು ಎಂದು ಹೇಳಿದರು.

ಸಂಘಗಳು ಕೆಲವು ಸಾಲಕ್ಕೆ ಸಿಮೀತಗೊಳ್ಳಬಾರದು, ಲಾಭ ಹೆಚ್ಚಿಸಿಕೊಳ್ಳಲು ಇರುವ ಮಾರ್ಗಗಳನ್ನು ಕಂಡುಕೊಳ್ಳಬೇಕು. ನಿಮ್ಮ ಪ್ರಯತ್ನಕ್ಕೆ ಸಹಕಾರ ನೀಡಲು ಬ್ಯಾಂಕ್ ಸದಾ ಸಿದ್ದ ಎಂದು ಪ್ರಕಟಿಸಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಮಹಿಳಾ ಸಂಘಗಳ ಕಾರ್ಯಚಟುವಟಿಕೆಗಳ ಕುರಿತು ತಿಳಿಸಿ, ಮಹಿಳೆಯರು ಭದ್ರತೆಯಿಲ್ಲದೇ ಪಡೆದ ಸಾಲವನ್ನು ಮರುಪಾವತಿ ಮಾಡುವುದಿಲ್ಲ ಎಂಬ ಕೂಗು ಇತ್ತು, ಅದನ್ನು ಮೀರಿ ಸಾಲ ನೀಡಿದ್ದು, ತಾಯಂದಿರು ನಂಬಿಕೆ ಉಳಿಸಿಕೊಂಡಿದ್ದಾರೆ, ಶೇ.100 ಮರುಪಾವತಿಯ ಮೂಲಕ ದಿವಾಳಿಯಾಗಿದ್ದ ಬ್ಯಾಂಕಿಗೆ ಜೀವ ತುಂಬಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಎಂ.ಎಲ್.ಅನಿಲ್‍ಕುಮಾರ್, ನಾಗನಾಳ ಸೋಮಣ್ಣ, ವ್ಯವಸ್ಥಾಪಕ ನಿರ್ದೇಶಕ ರವಿ, ಕೋಲಾರ ಶಾಖೆ ವ್ಯವಸ್ಥಾಪಕ ಅಂಬರೀಷ್, ಸೂಪರ್‍ವೈಸರ್ ಅಮಿನ್ ಮತ್ತಿತರರು ಹಾಜರಿದ್ದರು.

By Suddi9

Leave a Reply

Your email address will not be published. Required fields are marked *