ಬಂಟ್ವಾಳ : ಮಾನವೀಯ ಮೌಲ್ಯಗಳ ಪ್ರತಿಪಾದಕನಾಗಿ ಜಗತ್ತಿಗೆ ಸಹಿಷ್ಣುತೆಯನ್ನು ಸರ್ವಧರ್ಮ ಸಮಾನತೆಯನ್ನು ಸಾರಿದ ಜಗತ್ತಿನ ಅತ್ಯದ್ಬುತ ಮಹಾನ್ ವ್ಯಕ್ತಿತ್ವ ಸ್ವಾಮಿ ವಿವೇಕಾನಂದರದ್ದು. ಪ್ರತಿಯೊಬ್ಬರು ತ್ಯಾಗ ಮತ್ತು ಸೇವೆಗಳ ಮೂಲಕ ಜಾಗೃತರಾದಾಗ ಬಲಿಷ್ಠ ರಾಷ್ತ್ರದ ನಿರ್ಮಾಣವಾಗಬಹುದು, ಎಂಬ ವಿವೇಕಾನಂದ ವಾಣಿಯನ್ನು ನಾವು ಇಂದು ಮನನ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ, ಸಾರ್ವಕಾಲಿಕ ಉತ್ತಮ ಸಂದೇಶವನ್ನು ಸಾರಿರುವ ವಿವೇಕಾನಂದರ ಮಾತುಗಳು ಇಂದಿನ ಯುವಜನತೆಗೆ ದಾರಿದೀಪ. ಅವರು ಮೈಗೂಡಿಸಿಕೊಂಡಿದ್ದ ಜೀವನ ಮೌಲ್ಯಗಳು, ತಾಯಿನೆಲದ ಮೇಲಿನ ಪ್ರೀತಿ ಗೌರವಗಳು ನಮ್ಮಲ್ಲೂ ಒಡಮೂಡಬೇಕಾಗಿದೆ. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಮೈಗೂಡಿಸಿಕೊಂಡು ರಾಷ್ಟದ ಗತವೈಭವವನ್ನು ಪುನರ್ನಿರ್ಮಿಸಬೇಕಾಗಿದೆ ಎಂದು ಡಾ. ಎನ್.ಎಸ್.ಎ.ಎಮ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಅಕ್ಷಯ ಗೋಖಲೆ.
ಅವರು ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ಕಾಲೇಜಿನ ವಿವೇಕಾನಂದ ಬಳಗ ಮತ್ತು ರಾಮಕೃಷ್ಣ ಮಠ ಮಂಗಳೂರು, ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ವಿಜೇತ ಸ್ವಾಮಿ ವಿವೇಕಾನಂದರ ಐತಿಹಾಸಿಕ ಚಿಕಾಗೋ ಉಪನ್ಯಾಸ 125ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್ ವಹಿಸಿ, ಮಾತನಾಡುತ್ತ ವಿವೇಕಾನಂದರ ವಾಣಿಗಳು ನಮ್ಮ ಬದುಕಿಗೆ ದಾರಿದೀಪವಾಗಲಿ, ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬ ನಾಗರಿಕನೂ ಅರ್ಥೈಸಿಕೊಂಡು, ಬದುಕಿನಲ್ಲಿ ಅಳವಡಿಸಿ ಸುಭದ್ರ ರಾಷ್ಟ್ರ ನಿರ್ಮಾಣದ ಬುನಾದಿಗೆ ಸಾಕ್ಷಿಯಾಗೋಣ ಎಂಬ ಕರೆಯಿತ್ತರು ವೇದಿಕೆಯಲ್ಲಿ ವಿವೇಕಾನಂದ ಬಳಗದ ಅಧ್ಯಕ್ಷ ಶ್ರೀ ಕಿಟ್ಟು ರಾಮಕುಂಜ ಮತ್ತು ವಿದ್ಯಾರ್ಥಿ ಪದಾಧಿಕಾರಿಗಳಾದ ಸಂದೀಪ್ ಮತ್ತು ಪ್ರಿಯಾಂಕ ಪೈ ಉಪಸ್ಥಿತರಿದ್ದರು. ಕು ಮಾನಸ ಪ್ರಾರ್ಥಿಸಿ, ವೆಂಕಟರಮಣ ಭಟ್ ಸ್ವಾಗತಿಸಿ ಕು.ಕೀರ್ತನಾ ವಂದಿಸಿದರು. ವಿನುತಾ ಭಟ್ ಕಾರ್ಯಕ್ರಮ ನಿರೂಪಿಸಿದರು. ವಿವೇಕಾನಂದ ಬಳಗ ಸಲಹಾಗಾರ್ತಿ ಉಪನ್ಯಾಸಕಿ ಹರ್ಷಿತಾಸಹಕರಿಸಿದರು.

