ಕೈಕಂಬ : ಮೊನ್ನೆ ಸುರಿದ ಕುಂಭದ್ರೋಣ ಮಳೆಗೆ ಚಾರ್ಮಾಡಿ ಸಂಪೂರ್ಣ ಜಲಾವೃತಗೊಂಡಿದ್ದು, ಈಗ ಎಲ್ಲೆಡೆ ಗುಡ್ಡೆಯ ಮಣ್ಣು, ಕಲ್ಲು, ಅಲ್ಲಲ್ಲಿ ಕೆಸರು ನೀರು ಕಾಣುತ್ತಿದೆ. ನೂರಾರು ಮನೆಯವರು ಗುಡ್ಡದ ಅಂಚಿನಲ್ಲಿ ಟೆಂಟುಗಳಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ಸಂತ್ರಸ್ತರಿಗೆ ಈವರೆಗೆ ಸರ್ಕಾರದ ನೆರವು ಭರವಸೆ ಮಾತ್ರ ! ವಾಸ್ತವದಲ್ಲಿ ಇದುವರೆಗೆ ಇವರಿಗೆ ಸರ್ಕಾರದಿಂದ ಏನೂ ಸಿಕ್ಕಿಲ್ಲ. ಇಲ್ಲಿ ಈಗ(ಮಂಗಳವಾರ, ಬುಧವಾರ, ಗುರುವಾರ) ಮುಂಬೈಯಿಂದ ಸಂಗ್ರಹಿಸಿ, ಬಸ್ ಮತ್ತು ರೈಲಿನಲ್ಲಿ ತರಲಾಗಿದ್ದ ಮೂರು ಲೋಡ್ ಅಗತ್ಯ ಸೊತ್ತನ್ನು ಮಹಾರಾಷ್ಟ್ರ(ಮುಂಬೈ) ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಮುಂದಾಳತ್ವದ ತಂಡವೊಂದು, ದುರ್ಗಮ ಮಾರ್ಗಗಳಲ್ಲಿ ಸಾಗಿ ಸಂತ್ರಸ್ತರ ಟೆಂಟುಗಳಿಗೆ ಹೋಗಿ ನೆರವಿನ ಹಸ್ತ ಚಾಚಿದೆ.ಜಿಲ್ಲಾಡಳಿತದ ಸಹಾಯ ಪಡೆದು, ಮಾನವೀಯ ದೃಷ್ಟಿಯಲ್ಲಿ ನೆರವು ನೀಡುತ್ತಿರುವ ಈ ತಂಡಕ್ಕೆ ಸ್ಥಳೀಯರಿಂದ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗಿದೆ ಎಂದು ರೋನ್ಸ್ ಹೇಳುತ್ತಾರೆ…gur-aug-21-charmadi-2

gur-aug-21-charmadi-3

ಚಾರ್ಮಾಡಿಯಲ್ಲಿ ಏನಾಯಿತು ?!

“ನೋಡ ನೋಡುತ್ತಿದ್ದಂತೆ ದಟ್ಟ ಮೋಡ ಕವಿಯಿತು. ಸಂಜೆಯವರೆಗೆ ಎಡೆಬಿಡದೆ ಮಳೆ ಸುರಿಯಿತು. ಇಲ್ಲಿ ಹರಿಯುವ 90 ಅಡಿ ವಿಸ್ತಾರದ ತೋಡೊಂದು 400 ಅಡಿಗೂ ವಿಸ್ತಾರದಲ್ಲಿ ಸಮುದ್ರದಂತೆ ಹರಿಯಲಾರಂಭಿಸಿತು. ಗುಡ್ಡಗಳು ಜರಿದವು, ಕಲ್ಲು, ಮಣ್ಣು, ಮರಗಳು ಮನೆಗಳತ್ತ ಉರುಳಲಾರಂಭಿಸಿತು. ಮನೆಗಳು ಧರಾಶಾಯಿಯಾದವು. ಮನೆಮಂದಿಗೆ ನೆಲೆ ಇಲ್ಲದಂತಾಯಿತು. ಕೆಲವರು ಗುಡ್ಡದತ್ತ ಓಡಿದರೂ ಪ್ರಯೋಜನವಾಗಿಲ್ಲ. ಕೆಲವರು ಪ್ರಾಣ ಕಳೆದುಕೊಂಡರು. ಸಾಕು ಪ್ರಾಣಿಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಇದೆಲ್ಲವೂ ಕೆಲವೇ ತಾಸಿನೊಳಗೆ ನಡೆದು ಹೋಯಿತು. ಮರುದಿನ ನೋಡುವಾಗ ಊರಿಗೆ ಊರೇ ನೀರು ತುಂಬಿದ್ದು, ನಮ್ಮ ಮನೆ ಪ್ರದೇಶ ಗುರುತಿಸಲು ಕಷ್ಟವಾಗಿತ್ತು ಎಂದು ಮನೆ, ಆಸ್ತಿಪಾಸ್ತಿ ಕಳೆದುಕೊಡ ಚಾರ್ಮಾಡಿಯ ಶೀನಪ್ಪ ಗೌಡ, ಜಾನಕಿ, ಯು ಕೆ ಅಬ್ದುಲ್ ರಹಿಮಾನ್, ರಾಧಾಕೃಷ್ಣ ಮೊದಲಾದವರು ತಮ್ಮ ಅಳಲು ವ್ಯಕ್ತಪಡಿಸಿದರು.gur-aug-21-charmadi-1

ನಾವು ಗ್ರಹಿಸಿದ್ದೇ ಒಂದು ಇಲ್ಲಿನ ಸ್ಥಿತಿಯೇ ಮತ್ತೊಂದು ಆಗಿದೆ. ಮನೆಗಳಿಗೆ ತೆರಳಿ ಅಗತ್ಯ ಸೊತ್ತು ಹಂಚುವ ಎಂದರೆ ಮನೆಗಳೇ ಇಲ್ಲ. ಟೆಂಟುಗಳಿಗೆ ಹೋಗಿ ಸೊತ್ತು ಕೊಡೋಣವೆಂದರೆ, ಎದ್ದು ನೆರವಿನ ಸೊತ್ತು ಕೊಳ್ಳುವ ಶಕ್ತಿ ಮಂದಿಯಲ್ಲಿ ಇರಲಿಲ್ಲ. ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿರುವ ಮಂದಿಯ ಮೈಮೇಲೆ ಸೂಕ್ತ ಬಟ್ಟೆಬರೆಗಳಿರಲಿಲ್ಲ. ನಾವು ಬಟ್ಟೆಬರೆ, ಹಸಿವಿಗೆ ಬಿಸ್ಕತ್ತು-ನೀರು, ಆಹಾರ ಪೊಟ್ಟಣ ಹಾಗೂ ಚಾಪೆಯಂತಹ ಅಗತ್ಯ ಸೊತ್ತು ನೀಡಿದಾಗ ಸೊತ್ತು ತಮ್ಮದಾಗಿಸಿಕೊಂಡ ಮಂದಿ ಕೈಮುಗಿದ ದೈನ್ಯತಾ ಭಾವ ನಾನೆಂದೂ ಮರೆಯಲಾರೆ. ನಾವು ನಿಮಿತ್ತ ಮಾತ್ರ, ದೇವರೇ ನಮ್ಮಿಂದ ಈ ಕೆಲಸ ಮಾಡಿಸಿದ್ದಾರೆ ಎಂದಷ್ಟೇ ಅನಿಸಿತು.

 gur-aug-21-charmadi-6

gur-aug-21-charmadi-7

ಸಕಾಲದಲ್ಲಿ ಕಷ್ಟಕ್ಕೆ ಸ್ಪಂದಿಸಿದ ದೇವರು !

ಪ್ರಕೃತಿ ವಿಕೋಪ ಸಂಭವಿಸಿ ದಿನಗಳು ಕಳೆದರೂ, ಈವರೆಗೆ ನಮಗೆ ಸರ್ಕಾರದ ನೆರವು ಸಿಕ್ಕಿಲ್ಲ. ನೀವೇ ಇಲ್ಲಿಗೆ ಮೊದಲ ಬಾರಿ ಬಂದಿದ್ದೀರಿ. ಮುಂಬೈಯಿಂದ ಇಲ್ಲಿಯವರೆಗೆ ಬಂದು ಖುದ್ದಾಗಿ ಟೆಂಟುಗಳು, ಸಂತ್ರಸ್ತರಿರುವಲ್ಲಿಗೆ ಹೋಗಿ ಅಗತ್ಯ ಸೊತ್ತು ನೀಡುತ್ತಿರುವ ನಿಮ್ಮ ಕೆಲಸ ದೇವರು ಮೆಚ್ಚುವಂತಹದ್ದು. ಸರ್ಕಾರ ನಮ್ಮ ಕಷ್ಟಕ್ಕೆ ಸ್ಪಂದಿಸುವ ಮುಂಚೆಯೇ ನೀವು ನಮ್ಮನ್ನು ವಿಚಾರಿಸಿದ್ದೀರಿ. ದೇವರು ನಿಮಗೆ ಒಳ್ಳೆಯದು ಮಾಡಲಿ.

gur-aug-21-charmadi-9

gur-aug-21-charmadi-8

ಗುಡ್ಡ ಜರಿದರೂ ಕದಲದ ನಾಗಬನ, ರಕ್ತೇಶ್ವರಿ ಗುಡಿ

ಚಾರ್ಮಾಡಿಯ ಅಂತರಬೈಲು ಎಂಬಲ್ಲಿ ಎಂಬಲ್ಲಿನ ಸ್ಥಿತಿ ಹೇಳ ತೀರದು. ಇಲ್ಲಿನ ಎಲ್ಲ ಮನೆಗಳು ಕುಸಿದು ನೆಲಸಮವಾಗಿದೆ. ಆದರೆ ಇಲ್ಲಿದ್ದ ನಾಗಬನವೊಂದರಲ್ಲಿದ್ದ ನಾಗನ ಕಲ್ಲುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದರೂ, ಎಲ್ಲವೂ ಒಂದು ಕಡೆ ಜಮೆಯಾಗಿದೆ ನಿಂತಿವೆ. ಇದೇ ಪ್ರದೇಶದಲ್ಲಿರುವ ರಕ್ತೇಶ್ವರಿ ಗುಡಿಗೆ ಪ್ರಕೃತಿ ವಿಕೋಪದಿಂದ ಏನೂ ಆಗಿಲ್ಲ.gur-aug-21-charmadi-5

ದುರ್ಗಮ ಹಾದಿಯಲ್ಲಿ  ಸಾಗಿ ಸಂತ್ರಸ್ತರಿಗೆ ನೆರವು :

ಮುಂಬೈ ತಂಡವು ಚಾರ್ಮಾಡಿಯ ಕೆಳಭಾಗಕ್ಕೆ ಅಗತ್ಯ ಸೊತ್ತು ತುಂಬಿದ್ದ ಲಾರಿ ಕೊಂಡೊಯ್ದಿದೆ. ನಡೆದಾಡಲೂ ಸೂಕ್ತ ದಾರಿ ಇಲ್ಲದ್ದರಿಂದ ನೆರವಿನ ಸೊತ್ತುಗಳ ಮೂಟೆ ಹೆಗಲಿಗೇರಿಸಿಕೊಂಡು ನೂರಾರು ಮೈಲು ನಡೆದಾಡಿದ ತಂಡದ ಸದಸ್ಯರು ಚಾರ್ಮಾಡಿಯ ಹೊೈಗೆ ಗದ್ದೆ-ಚಿಬಿದ್ರೆ, ಅಂತರ ಚಾರ್ಮಾಡಿ, ಕೊಳಂಬೆ, ಬಲ್ಲಂಡ, ಮದರಂಗಿಬೆಟ್ಟು, ಉರ್ಪೆದಗುಡ್ಡೆ, ಕೆರೆಕೋಡಿ ವಳಂಬ್ರ, ಕೋಡಿ, ನಳ್ಳಿಲು-ಚಿಬಿದ್ರೆ, ಕಕ್ಕಿಂಜೆ-ಚಿಬಿದ್ರೆ, ಹೊಸಮಠ, ಪೊಂಗರ್ದಡಿ, ಆರ್ತಿತ್ತಿಲು, ಕೊಟ್ರಬೆಟ್ಟು, ಕಲ್ಲೆಟ್ಟು ಮೊದಲಾದೆಡೆ ಸಂತ್ರಸರಿಗೆ ಅಗತ್ಯ ಸೊತ್ತು ಹಂಚಿದೆ. ಇವರ ತಂಡದಲ್ಲಿ ಆರೀಫ್ ಕಲಕಟ್ಟಾ, ಶಿಕ್ಷಕ ವಿಠಲ ಅಬುರ, ಶಶಿಧರ ಪೊಯ್ಯತ್ತಬೈಲು, ಮೋಹನ್ ಕುತ್ತಾರು, ವಸಂತ ಕೊಣಾಜೆ, ಅಶ್ವಿನ್ ಕುತ್ತಾರು, ಕೀರ್ತನ್ ದೇವಾಡಿಗ ಹಾಗೂ ಸ್ಥಳೀಯ ಕೆಲವು ಯುವಕರು ಒಳಗೊಂಡಿದರು.

 gur-aug-21-charmadi-4

ಮೆಸ್ಕಾಂಗೆ ಸೆಲ್ಯೂಟ್ :

ಚಾರ್ಮಾಡಿಯ ಎಲ್ಲೂ ವಿದ್ಯುತ್ ಇಲ್ಲ. ಇಷ್ಟೆಲ್ಲ ಗಂಡಾಂತರ ಸಂಭವಿಸಿದರೂ, ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಲ್ಪಿಸಲು ದಿನರಾತ್ರಿ ಹೆಣಗಾಡುತ್ತಿದ್ದರು. ಚಾರ್ಮಾಡಿಯ ಅಂತರಬೈಲು ಪ್ರದೇಶದಲ್ಲಿ ಮೆಸ್ಕಾಂ ಸಿಬ್ಬಂದಿ ರಾತ್ರಿ ವೇಳೆಯೂ ವಿದ್ಯುತ್ ಕಂಬಗಳಲ್ಲಿ ತುರ್ತು ಕೆಲಸ ಮಾಡುತ್ತಿದ್ದರು. ಇವರ ಈ ಕೆಲಸ ಕಂಡು ನಮ್ಮ ತಂಡ ಮೆಸ್ಕಾಂ ಸಿಬ್ಬಂದಿಗೆ ಆಹಾರ ತೆಗೆದುಕೊಳ್ಳಲು ಕೈಲಾದ ನೆರವು ನೀಡಿತು. ಅವರು ಸಂತೋಷದಿಂದ ಸ್ವೀಕರಿಸಿದ್ದಾರೆ. ನಮ್ಮ ಶ್ರಮವು ನಿಜವಾದ ಸಂತ್ರಸ್ತರ ಹುಡುಕಿ, ಪರಿಹಾರ ನೀಡುವಲ್ಲಿ ಸಾರ್ಥಕ್ಯತೆ ಪಡೆಯಿತು ಎಂಬ ತೃಷ್ತಿ ಒಟ್ಟು ತಂಡಕ್ಕಿದೆ ಎಂದು ರೋನ್ಸ್ ಬಂಟ್ವಾಳ ಹೇಳುತ್ತಾರೆ.

ದನಂಜಯ ಗುರುಪುರ

By Suddi9

Leave a Reply

Your email address will not be published. Required fields are marked *