ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇದರ ಆಂತರಿಕ ಗುಣಮಟ್ಟ ಭರವಸೆ ಕೋಶ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಲರ್ನರ್ಸ್ ಫೋರಂ ಆಶ್ರಯದಲ್ಲಿ ರಾಷ್ಟ್ರೀಯ ಸದ್ಭಾವನಾ ದಿನವನ್ನು ಆಚರಿಸಲಾಯಿತು.

ಈ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತ್ಯನಾರಾಯಣ ಭಟ್ ಅವರು ಮಾತನಾಡಿ, ದೇಶ ಕಂಡ ಅತ್ಯಂತ ಕಿರಿಯ ವಯಸ್ಸಿನ ದಕ್ಷ ಪ್ರಧಾನಿಯಾಗಿದ್ದ ರಾಜೀವ ಗಾಂಧಿಯವರ 75ನೇ ಹುಟ್ಟುಹಬ್ಬದ ಪ್ರಯುಕ್ತ ದೇಶಾದ್ಯಂತ ಈ ದಿನ ಸದ್ಭಾವನಾ ದಿನವನ್ನು ಆಚರಿಸಲಾಗುತ್ತಿದೆ. ಆಧುನಿಕ ಭಾರತದ ಕನಸನ್ನು ಕಂಡ ದೂರದೃಷ್ಠಿಯ ರಾಜೀವ ಗಾಂಧಿಯವರು ದೇಶದ ಏಕತೆ, ಭಾವೈಕ್ಯತೆ, ಜಾತ್ಯಾತೀತತೆ, ಭ್ರಾತೃತ್ವ ಹಾಗೂ ಸಮಗ್ರ ಪ್ರಜಾಪ್ರಭುತ್ವದ ತತ್ವಾದರ್ಶಗಳ ಮೂಲಕ ಪ್ರಗತಿಗೆ ಕಾರಣರಾದವರು. ಅವರ ಆದರ್ಶಗಳನ್ನು ಪಾಲಿಸಿ ಭಾರತಾಂಬೆಯ ಮಕ್ಕಳಾದ ನಾವೆಲ್ಲರೂ ಜಾತಿ, ಧರ್ಮ, ಮತ, ಪಂಥ, ಭಾಷೆ ಹಾಗೂ ಪ್ರಾಂತೀಯ ಭೇದ ಭಾವಗಳನ್ನು ಮರೆತು ಒಬ್ಬರನ್ನೊಬ್ಬರು ಗೌರವಿಸಬೇಕು ಎಂದರು.
ಲರ್ನರ್ಸ್ ಫೋರಂನ ಸಂಯೋಜಕರಾದ ವಿನಯ್ ಎಂ.ಎಸ್ ವಿದ್ಯಾರ್ಥಿಗಳನ್ನುದ್ದೇಶಿಸಿ ಸದ್ಭಾವನಾ ದಿನದ ಆಚರಣೆಯ ಉದ್ದೇಶವನ್ನು ವಿವರಿಸಿದರು. ಉಪನ್ಯಾಸಕ ಅಶ್ವಿತ್ ಬಿ ರಾಷ್ಟ್ರೀಯ ಭಾವೈಕ್ಯತೆಯ ಕುರಿತು ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಗಳಾದ ದೇವಿಪ್ರಸಾದ್ ರವರು ವಿದ್ಯಾರ್ಥಿಗಳಿಗೆ ಸದ್ಭಾವನಾ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಸಹಾಯಕ ಪ್ರಾಧ್ಯಾಪಕ ಹನುಮಂತಯ್ಯ ಜಿ.ಹೆಚ್ ಹಾಗೂ ಗ್ರಂಥಪಾಲಕರಾದ ಶ್ರೀನಿವಾಸ ರವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಗಳಾದ ಸುಮಲತಾ ಸ್ವಾಗತಿಸಿದರೆ, ಆಶ್ರೀತ್ ವಂದಿಸಿದರು. ನೀಮಾ ಕಾರ್ಯಕ್ರಮ ನಿರೂಪಿಸಿದರು,
