ಬಂಟ್ವಾಳ, : ಬಾಲ್ಯ ವಿವಾಹಕ್ಕೆ ಸಿದ್ಧತೆ ನಡೆಸುತ್ತಿರುವ ಮಾಹಿತಿ ಪಡೆದ ಅಧಿಕಾರಿಗಳು ಮಧ್ಯಪ್ರವೇಶಿಸಿ ಮದುವೆಗೆ ಬ್ರೇಕ್ ಹಾಕಿದ ಘಟನೆ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನಾವೂರ ಗ್ರಾಮದ ಬಾಲಕಿಯೋರ್ವಳ ಜೊತೆ ಮೂಡಬಿದಿರೆಯ ಯುವಕನ ಜೊತೆ ಆ. ೧೯ರಂದು ಮದುವೆಯಾಗೆ ಪೂರ್ವತಯಾರಿ ನಡೆದಿತ್ತು. ಈ ಬಗ್ಗೆ ಆ.೧೭ರಂದು ನಾವೂರು ಗ್ರಾಮದ ಫರ್ಲ ಶಾಲಾ ಬಳಿಯ ಮನೆಯೊಂದರಲ್ಲಿ ಬಾಲಕಿಗೆ ನಿಶ್ಚಿತಾರ್ಥ ಏರ್ಪಡಿಲಾಗಿತ್ತು. ಈ ಕುರಿತು ಖಚಿತ ಮಾಹಿತಿ ಪಡೆದ ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಅಧಿಕಾರಿ ಗಾಯತ್ರಿ ಕಂಬಳಿ, ಮಕ್ಕಳ ರಕ್ಷಣಾಧಿಕಾರಿ ಕುಮಾರ್, ಗ್ರಾಪಂ ಪಿಡಿಒ ರಚನ್ ಕುಮಾರ್, ಗ್ರಾಮಕರಣಿಕ ಕುಮಾರ್ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಮನೆಗೆ ಭೇಟಿ ನೀಡಿದ್ದಾರೆ.
ಈ ವೇಳೆ ನಿಶ್ಚಿತಾರ್ಥ ನಡೆಯುತ್ತಿತ್ತು ಎನ್ನಲಾಗಿದ್ದು, ಬಾಲ್ಯ ವಿವಾಹದಿಂದ ಮಕ್ಕಳ ಮೇಲಾಗುವ ದುಷ್ಪರಿಣಾಮ ಹಾಗೂ ಅನಾಹುತಗಳನ್ನು ಸವಿವರವಾಗಿ ಪಾಲಕರಿಗೆ ತಿಳಿಸಿ, ಮನವೊಲಿಸಿ ಬಾಲ್ಯ ವಿವಾಹವಾಗುವುದನ್ನು ತಡೆಯುವಲ್ಲಿ ಯಶಸ್ವಿಯಾದರು.ಬಾಲಕಿಗೆ ೨೦೨೦ರ ಜನವರಿ ತಿಂಗಳಿಗೆ ೧೮ ವರ್ಷ ವಯಸ್ಸಾಗುತ್ತದೆ. ಬಾಲ್ಯ ವಿವಾಹ ಮಾಡಿದಲ್ಲಿ ಅವರ ಮೇಲೆ ಆಗುವ ಶಿಕ್ಷೆ ಹಾಗೂ ದಂಡದ ಬಗ್ಗೆ ಜಾಗೃತಿ ನೀಡಲಾಗಿದೆ. ಈ ಬಗ್ಗೆ ಮನೆಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬಳಿ
ನಂತರ ಪಾಲಕರಿಂದ ಬಾಲಕಿಗೆ ೧೮ ವರ್ಷ ಆಗುವ ತನಕ ಮದುವೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ ಎಂದು ಪಿಡಿಒ ರಚನ್ ಕುಮಾರ್ ತಿಳಿಸಿದ್ದಾರೆ.


